ನೌಕರರ ಸಂಘದ ಪದಾಧಿಕಾರಿಗಳಿಗೆ ಅಭಿನಂದನೆ

Lingayat Mahamath Abhinandana Programme
Published on

ಬೀದರ್: ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳನ್ನು ಲಿಂಗಾಯತ ಮಹಾ ಮಠದ ವತಿಯಿಂದ ನಗರದ ಬಸವಗಿರಿಯಲ್ಲಿ ಈಚೆಗೆ ಅಭಿನಂದಿಸಲಾಯಿತು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಬಿರಾದಾರ ಚಿದ್ರಿ, ರಾಜ್ಯ ಪರಿಷತ್ ಸದಸ್ಯ ರಾಜಕುಮಾರ ಮಾಳಗೆ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಭುಲಿಂಗ ತೂಗಾಂವಕರ್ ಹಾಗೂ ಖಜಾಂಚಿ ದೇವಪ್ಪ ಚಾಂಬೋಳೆ ಅವರನ್ನು ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ವಚನ ಗ್ರಂಥ ನೀಡಿ ಗೌರವಿಸಲಾಯಿತು.

ಸರ್ಕಾರಿ ನೌಕರರು ಬುದ್ಧಿ ಜೀವಿಗಳು. ಜನ ಸೇವೆಯ ಅವಕಾಶ ಪಡೆದ ಸುದೈವಿಗಳು. ಜನ ಸೇವೆಯೇ ಜನಾರ್ಧನ ಸೇವೆಯೆಂದು ಮನಗಂಡು ಜಿಲ್ಲೆಯ ಅಭಿವೃದ್ಧಿ ಮತ್ತು ಜನರಿಗೆ ಉತ್ತಮ ಸೇವೆ ನೀಡುವತ್ತ ಜಿಲ್ಲೆಯ ನೌಕರರನ್ನು ನೂತನ ಪದಾಧಿಕಾರಿಗಳು ಮುನ್ನಡೆಸಬೇಕು ಎಂದು ಸಾನಿಧ್ಯ ವಹಿಸಿದ್ದ ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ನುಡಿದರು.

ಸಂಘದ ಜಿಲ್ಲಾ ಅಧ್ಯಕ್ಷರು ಸಮಸ್ತ ನೌಕರರ ಅಭ್ಯುದಯಕ್ಕೆ ಶ್ರಮಿಸುವ ಮೂಲಕ ಐತಿಹಾಸಿಕ ಗೆಲುವನ್ನು ಸಾರ್ಥಕ ಪಡೆಸಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲೆಯ ನೌಕರರು ನಮ್ಮ ತಂಡದ ಮೇಲೆ ವಿಶ್ವಾಸವಿಟ್ಟು ಅಭೂತಪೂರ್ವ ಗೆಲುವು ತಂದುಕೊಟ್ಟಿದ್ದಾರೆ. ಅವರ ನಿರೀಕ್ಷೆಯಂತೆ ತಂಡ ಕೆಲಸ ಮಾಡಲಿದೆ. ಹಳೆಯ ಪಿಂಚಣಿ ಯೋಜನೆ ಮರು ಜಾರಿಗೆ ಪ್ರಯತ್ನಿಸಲಾಗುವುದು. ಕೇಂದ್ರ ಸರ್ಕಾರಿ ನೌಕರರಿಗೆ ಸರಿ ಸಮನಾದ ವೇತನಕ್ಕಾಗಿ ಹೋರಾಟ ನಡೆಸಲಾಗುವುದು ಎಂದು ಸನ್ಮಾನ ಸ್ವೀಕರಿಸಿದ ಸೋಮಶೇಖರ ಬಿರಾದಾರ ಚಿದ್ರಿ ಹೇಳಿದರು.

ರಾಜಕುಮಾರ ಮಾಳಗೆ ಅವರು, ಅಕ್ಕ ಅನ್ನಪೂರ್ಣ ತಾಯಿಯವರ ಜತೆಗಿನ ಒಡನಾಟವನ್ನು ಸ್ಮರಿಸಿದರು. ಅವರು ಬಸವ ತತ್ವ ಪ್ರಚಾರದಲ್ಲಿ ನಾಡಿಗೆ ಮಾದರಿಯಾಗುವಂತೆ ದುಡಿದ ಗುರುಗಳಾಗಿದ್ದರು. ಅವರು ಸ್ಥಾಪಿಸಿದ ಮಠದಿಂದ ಇಂದು ನಮಗೆ ಆಶೀರ್ವಾದ ಲಭಿಸಿದೆ. ಹೊಸ ಸ್ಫೂರ್ತಿ, ಹೊಸ ಶಕ್ತಿಯಿಂದ ಜಿಲ್ಲೆಗಾಗಿ ದುಡಿಯುತ್ತೇವೆ ಎಂದು ತಿಳಿಸಿದರು.

ಬಸವಪ್ರಭು ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಸಾಹಿತಿ ರಮೇಶ ಮಠಪತಿ, ಮಾಣಿಕಪ್ಪ ಗೋರನಾಳೆ, ಅಶೋಕ ಎಲಿ, ಡಾ. ಬಸವರಾಜ ಮಠಪತಿ, ಭಕ್ತರಾಜ ಖಂಡ್ರೆ, ಚನ್ನಬಸವ ಹಂಗರಗಿ, ಮಾರುತಿ ಪಾಟೀಲ, ಸಿ.ಎಸ್. ಗಣಾಚಾರಿ, ಶ್ಯಾಮಲಾ ಎಲಿ, ಅಭಿಷೇಕ ಮಠಪತಿ, ಮಲ್ಲಿಕಾರ್ಜುನ ಔರಾದೆ, ಕಾಶಿನಾಥ ಪಾಟೀಲ ಮತ್ತಿತರರು ಇದ್ದರು.

ಪರುಷ ಕಟ್ಟೆಯ ಚನ್ನಬಸವಣ್ಣ ವಚನ ಗಾಯನ ನಡೆಸಿಕೊಟ್ಟರು. ರಾಜಕುಮಾರ ಪಾಟೀಲ ಸ್ವಾಗತಿಸಿದರು. ಆನಂದ ವಡ್ಡನಕೇರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net