

ಚಿತ್ರದುರ್ಗ: ರಾಜ್ಯ ಸರ್ಕಾರಿ ನೌಕರರ ಸಂಘದಿಂದ ತರಾಸು ರಂಗಮಂದಿರದಲ್ಲಿ ಡಿ. 15ರಂದು ಬೆಳಗ್ಗೆ 10ಕ್ಕೆ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾ ಶಾಖೆಯ ಅಧ್ಯಕ್ಷ ಮಾಲತೇಶ್ ಮುದ್ದಜ್ಜಿ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಉದ್ಘಾಟಿಸುವರು. ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಸಂಸದ ಗೋವಿಂದ ಎಂ. ಕಾರಜೋಳ ಸೇರಿ ಜಿಲ್ಲೆಯ ಎಲ್ಲ ಶಾಸಕರು, ಎಂಎಲ್ಸಿಗಳು, ಮಂಡಳಿ, ಪ್ರಾಧಿಕಾರ, ಆಯೋಗದ ಅಧ್ಯಕ್ಷರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
2024ರಿಂದ 2029 ರವರೆಗೆ ಸಂಘದ ನೂತನ ಪದಾಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದು, ಸಾಧ್ಯವಾದಷ್ಟು ಸರ್ಕಾರಿ ನೌಕರರಿಗೆ ಅನುಕೂಲವಾಗುವಂತೆ ಕಾರ್ಯ ನಿರ್ವಹಿಸಲಾಗುವುದು ಎಂದು ಹೇಳಿದರು.
ಹಾಲಿ ಸರ್ಕಾರಿ ನೌಕರರು ಮೃತಪಟ್ಟಲ್ಲಿ ಅವರ ಅಂತ್ಯಕ್ರಿಯೆಗೆ ಸಂಘದಿಂದ 5ಸಾವಿರ ರೂ., ಚಿತ್ರದುರ್ಗದಲ್ಲಿ ಭವನ ನಿರ್ಮಾಣ, ಜ್ಯೋತಿ ಸಂಜೀವಿನಿ ಯೋಜನೆ ಜಾರಿ, ಎನ್‌ಪಿಎಸ್ ರದ್ದು, ಹಳೆ ಪಿಂಚಿಣಿ ಜಾರಿ ಸೇರಿ ಕೇಂದ್ರ ಮಾದರಿ ವೇತನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸುವ ಸಲುವಾಗಿ ರಾಜ್ಯ ಸಂಘದ ಜೊತೆ ಹೋರಾಟ ನಡೆಸಲಿದ್ದೇವೆ ಎಂದು ತಿಳಿಸಿದರು.
ಸಂಘದ ಜಿಲ್ಲಾ ಖಂಜಾಚಿ ಮಲ್ಲಿಕಾರ್ಜುನ್, ಕಾರ್ಯದರ್ಶಿ ಶ್ರೀನಿವಾಸ್, ನಿರ್ದೇಶಕ ಜಗ್ಗೇಶ್, ರಾಜ್ಯ ಪರಿಷತ್ ಸದಸ್ಯ ಎಸ್.ರಾಜಪ್ಪ, ಎಸ್.ಕೆ.ಮಂಜುನಾಥ್ ಇತರರಿದ್ದರು.