ನೌಕರರ ವಜಾ ಖಂಡಿಸಿ ಸಾರಿಗೆ ನೌಕರರ ಪಾದಯಾತ್ರೆ, ನೆಲಮಂಗಲದಿಂದ ರಾಜಧಾನಿಯತ್ತ ಸಾಗಿದ ಪ್ರತಿಭಟನಾಕಾರರು

07 Nela Ph 01 Padhayatre
Published on

ನೆಲಮಂಗಲ: ರಾಜ್ಯ ರಸ್ತೆ ಸಾರಿಗೆ ನೌಕರರ ಮುಷ್ಕರದ ಸಂದರ್ಭದಲ್ಲಿ ಕಾನೂನುಬಾಹಿರವಾಗಿ ನೌಕರರನ್ನು ವಜಾಗೊಳಿಸಿರುವ ಸರ್ಕಾರದ ಕ್ರಮ ಖಂಡಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನೌಕರರು ಬಳ್ಳಾರಿಯಿಂದ ಪಾದಯಾತ್ರೆ ಹೊರಟಿದ್ದು, ಸೋಮವಾರ ರಾತ್ರಿ ನೆಲಮಂಗಲ ತಲುಪಿದರು.

ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ತಂಗಿದ್ದ ಪ್ರತಿಭಟನಾಕಾರರು, ರಾಜಧಾನಿ ತಲುಪಿದ ನಂತರದಲ್ಲಿ ತಾವು ಅನುಸರಿಸಬೇಕಾದ ಹೋರಾಟದ ರೂಪುರೇಷೆ ಕುರಿತು ಚರ್ಚಿಸಿದರು.

ಮಂಗಳವಾರ ಬೆಳಗ್ಗೆ ನೆಲಮಂಗಲದಿಂದ ಹೊರಟ ಪ್ರತಿಭಟನಾಕಾರರು, ಬೆಂಗಳೂರಿನ ಜಾಲಹಳ್ಳಿ ಕ್ರಾಸ್ ಬಳಿಯಿರುವ ಬಸವೇಶ್ವರ ಬಸ್ ನಿಲ್ದಾಣದ ಬಳಿ ತಂಗಲಿದ್ದಾರೆ. ಬುಧವಾರ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ, ವಜಾಗೊಂಡಿರುವ ಸಾರಿಗೆ ನೌಕರರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮನವಿಸಲ್ಲಿಸಲಿದ್ದಾರೆ.

ನ.29ರಂದು ಆರಂಭವಾದ ಪಾದಯಾತ್ರೆ ವಿವಿಧ ಬೇಡಿಕೆ ಈಡೇರಿಸಿಕೊಳ್ಳುವ ಉದ್ದೇಶದಿಂದ ಸಾರಿಗೆ ನೌಕರರು ನ.29ರಂದು ಬಳ್ಳಾರಿಯಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭಿಸಿದ್ದಾರೆ. ನೆಲಮಂಗಲದವರೆಗೆ ಒಟ್ಟು 250 ಕಿ.ಮೀ. ಅಂತರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿದ್ದಾರೆ.

ಸಾರ್ವಜನಿಕರ ಅನುಕೂಲಕ್ಕಾಗಿ ಸಾರಿಗೆ ನೌಕರರು ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೂ ನಮ್ಮನ್ನು ರಾಜ್ಯ ಸರ್ಕಾರ ಕಡೆಗಣಿಸುತ್ತಿದೆ. ಮುಷ್ಕರ ಕೈಗೊಂಡಿದ್ದಾಗ ರಾಜ್ಯದ ವಿವಿಧೆಡೆ ಕಾರ್ಯನಿರ್ವಹಿಸುತ್ತಿದ್ದ 2,152 ನೌಕರರನ್ನು ಸರ್ಕಾರ ವಜಾಗೊಳಿಸಿದೆ. ಈಗ ಅವರೆಲ್ಲರ ಕುಟುಂಬ ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆನ್ಯಾಯದ ವಿರುದ್ಧ ಹೋರಾಡಲು ಅವಕಾಶವಿದೆ. ಆದರೂ ನೌಕರರನ್ನು ಕೆಲಸದಿಂದ ತೆಗೆದು 9 ತಿಂಗಳಾದರೂ ಸರ್ಕಾರ ನ್ಯಾಯ ದೊರಕಿಸಿಕೊಡುತ್ತಿಲ್ಲ. ಚಿಕ್ಕತಿಮ್ಮಯ್ಯ, ಪ್ರತಿಭಟನಾಕಾರ ವಜಾಗೊಂಡ ನೌಕರರಿಗೆ ನ್ಯಾಯ ದೊರಕಿಸಿಕೊಡುವುದಾಗಿ ಸಾರಿಗೆ ಸಚಿವರು ಹಾಗೂ ಸಿಎಂ ಭರವಸೆ ನೀಡಿದ್ದರು. ಆದರೆ, ಅದು ಇನ್ನೂ ಭರವಸೆಯಾಗಿಯೇ ಉಳಿದಿದೆ. ನಾವು ಸರ್ಕಾರದ ವಿರುದ್ಧ ಹೋರಾಡುತ್ತಿಲ್ಲ. ವಜಾಗೊಳಿಸಿರುವ ನೌಕರರನ್ನು ಮತ್ತೆ ಕೆಲಸಕ್ಕೆ ಸೇರ್ಪಡೆಗೊಳಿಸಿಕೊಳ್ಳಬೇಕು ಎಂಬುದಷ್ಟೇ ನಮ್ಮ ಆಗ್ರಹವಾಗಿದೆ. ದೊಡ್ಡಪ್ಪ, ಪ್ರತಿಭಟನಾಕಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net