ನೌಕರರ ಬಿಗಿಪಟ್ಟು, ಪ್ರಯಾಣಿಕರ ಜೇಬಿಗೆ ಪೆಟ್ಟು

7 GAJENDRAGAD 2
Published on

ಗದಗ: ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ಒತ್ತಾಯಿಸಿ ಬುಧವಾರದಿಂದ ಸಾರಿಗೆ ಸಂಸ್ಥೆ ನೌಕರರು ಕರ್ತವ್ಯಕ್ಕೆ ಗೈರಾಗಿದ್ದರಿಂದ ಜಿಲ್ಲೆಯಲ್ಲಿ ಯಾವುದೇ ಬಸ್​ಗಳು ಸಂಚರಿಸಲಿಲ್ಲ. ಹೀಗಾಗಿ, ದೂರದ ಊರುಗಳಿಗೆ ಹೋಗಬೇಕಿದ್ದ ಪ್ರಯಾಣಿಕರು ತೊಂದರೆ ಅನುಭವಿಸಿದರು.

ಬಸ್ ಸಂಚಾರ ಬಂದ್ ಆಗಿದ್ದರಿಂದ ವಿದ್ಯಾರ್ಥಿಗಳು, ಮಹಿಳೆಯರು, ರೋಗಿಗಳು ತೀವ್ರ ತೊಂದರೆ ಅನುಭವಿಸಿದರು. ಸಾರಿಗೆ ನೌಕರರು ಮತ್ತು ಸರ್ಕಾರದ ಕಾರ್ಯವೈಖರಿ ವಿರುದ್ಧ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಕಂಡುಬಂದಿತು.

ಸಾರಿಗೆ ನೌಕರರ ಮುಷ್ಕರದ ಕುರಿತು ಅರಿಯದೆ ಪರ ಊರಿಗೆ ತೆರಳಲು ಬೆಳಗ್ಗೆ ಹಲವಾರು ಜನರು ಆಗಮಿಸಿದ್ದರು. ಆದರೆ, ಬಸ್ ಸಂಚಾರ ಇಲ್ಲ ಎಂದು ತಿಳಿದ ನಂತರ ಪ್ರಯಾಣಿಕರು ಸರ್ಕಾರಕ್ಕೆ ಹಿಡಿಶಾಪ ಹಾಕಿದರು. ಅನೇಕ ಜನರು ಬಸ್ ಸಂಚಾರ ಆರಂಭವಾಗಬಹುದು ಎಂದು ಕಾದು ಕುಳಿತರು. ಕೆಲ ಹೊತ್ತು ಬಸ್ ನಿಲ್ದಾಣದಲ್ಲಿ ಕಾಲ ಕಳೆದು ಖಾಸಗಿ ವಾಹನಗಳ ಮೂಲಕ ಪ್ರಯಾಣಿಸಿದರು. ಸರ್ಕಾರದ ನಿರ್ದೇಶನದ ಮೇರೆಗೆ ಜಿಲ್ಲೆಯಲ್ಲಿ 600ಕ್ಕೂ ಖಾಸಗಿ ಬಸ್, ಮ್ಯಾಕ್ಸಿಕ್ಯಾಬ್ ಇತರೆ ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ಮುಷ್ಕರದ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನದಿಂದಲೇ ಬಸ್ ಸಂಚಾರದಲ್ಲಿ ಅಡಚಣೆ ಉಂಟಾಯಿತು. ಗ್ರಾಮೀಣ ಭಾಗದ ರಾತ್ರಿ ಪಾಳಿಯ ಬಸ್ ಸಂಚಾರ ಭಾಗಶಃ ಬಂದ್ ಆಗಿತ್ತು. ಬುಧವಾರವಂತೂ ಸಾರಿಗೆ ನೌಕರರು ಬಸ್ ನಿಲ್ದಾಣ, ಡಿಪೋ ಕಡೆಗೆ ಸುಳಿಯಲಿಲ್ಲ. ಕೆಲ ಸಿಬ್ಬಂದಿ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿರುವ ಸ್ಥಿತಿ ನೋಡಿಕೊಂಡು ಮರಳುತ್ತಿರುವುದು ಕಂಡುಬಂದಿತು.

ಮುಷ್ಕರದಿಂದ ಬುಧವಾರ ಬೆಳಗ್ಗೆಯಿಂದ ಒಂದು ಬಸ್ ಸಹ ಸಂಚರಿಸಿಲ್ಲ. ಚಾಲಕ, ನಿರ್ವಾಹಕರು ಮತ್ತು ಮೆಕ್ಯಾನಿಕ್​ಗಳು ಕರ್ತವ್ಯಕ್ಕೆ ಹಾಜರಾಗಿಲ್ಲ. ಸಿಬ್ಬಂದಿಯ ಮನೆಮನೆಗೆ ತೆರಳಿ ಮನವೊಲಿಸುವ ಕಾರ್ಯ ಮುಂದುವರಿದಿದೆ. ಆದರೆ, ಸಿಬ್ಬಂದಿ ಕೆಲಸಕ್ಕೆ ಹಾಜರಾಗುತ್ತಿಲ್ಲ. ಖಾಸಗಿ ವಾಹನಗಳು ಬಸ್ ನಿಲ್ದಾಣದೊಳಗೆ ಬಂದು ಜನರನ್ನು ಕರೆದೊಯ್ಯುತ್ತಿವೆ. ಸಾರ್ವಜನಿಕರಿಗೆ ಅಷ್ಟಾಗಿ ತೊಂದರೆ ಆಗುತ್ತಿಲ್ಲ. ಜಿಲ್ಲೆಯಲ್ಲಿ 489 ಮಾರ್ಗಗಳಲ್ಲಿ ಬಸ್​ಗಳು ಸಂಚರಿಸುತ್ತವೆ. ಮುಷ್ಕರದಿಂದ ಸಾರಿಗೆ ಸಂಸ್ಥೆಗೆ ದಿನಕ್ಕೆ 50 ಲಕ್ಷ ರೂ.ನಷ್ಟವಾಗುತ್ತಿದೆ.| ಎಫ್.ಸಿ. ಹಿರೇಮಠ ವಿಭಾಗೀಯ ನಿಯಂತ್ರಣಾಧಿಕಾರಿ ವಾಕರಸಾ ಸಂಸ್ಥೆ, ಗದಗ ಸರ್ಕಾರ ಮತ್ತು ಸಾರಿಗೆ ನೌಕರರ ಮಧ್ಯೆ ನಡೆದಿರುವ ಹಗ್ಗಜಗ್ಗಾಟ ಬೇಗನೆ ಕೊನೆಗೊಳ್ಳಬೇಕು. ಇವರಿಬ್ಬರ ಹಠದಿಂದ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಗಿದೆ. ಹೀಗಾಗಿ ಕೂಡಲೇ ಸಮಸ್ಯೆ ಇತ್ಯರ್ಥಪಡಿಸಬೇಕು. | ರಾಜಶೇಖರ ಕುರಹಟ್ಟಿ ಪ್ರಯಾಣಿಕ ಮುಂಡರಗಿ

ಬಂಡಾಯದ ನಾಡಿಗೆ ಪ್ರತಿಭಟನೆ ಬಿಸಿ
ನರಗುಂದ:
ಸಾರಿಗೆ ನೌಕರರ ಮುಷ್ಕರದಿಂದ ಬಸ್ ಸಂಚಾರ ಬುಧವಾರ ಸ್ಥಗಿತಗೊಂಡಿತ್ತು. ಇದರಿಂದಾಗಿ ನರಗುಂದದಿಂದ ಹುಬ್ಬಳ್ಳಿ, ಗದಗ, ಕೊಣ್ಣೂರ, ಬಾಗಲಕೋಟೆ, ಮುನವಳ್ಳಿ, ಸುರೇಬಾನ, ರಾಮದುರ್ಗ ಮೊದಲಾದೆಡೆ ತೆರಳುವ ಜನರು ಪರದಾಡಿದರು.

ಪ್ರತಿಭಟನೆ ಬಿಸಿ ತಾಲೂಕಿನ ಜನರಿಗೆ ಜೋರಾಗಿ ತಟ್ಟಿದೆ. ಖಾಸಗಿ ವಾಹನಗಳ ಮಾಲೀಕರು ಪ್ರಯಾಣಿಕರಿಂದ ದುಪ್ಪಟ್ಟು ಹಣ ಪಡೆದು ಲಾಭ ಮಾಡಿಕೊಂಡರು. ನರಗುಂದದಿಂದ ಹುಬ್ಬಳ್ಳಿಗೆ 60 ರೂಪಾಯಿ ದರವಿದೆ. ಆದರೆ, ಖಾಸಗಿ ವಾಹನಗಳ ಮಾಲೀಕರು ಪ್ರಯಾಣಿಕರಿಂದ 100 ರೂಪಾಯಿ ಪಡೆಯುತ್ತಿರುವುದು ಕಂಡುಬಂತು.

ಬೆಳಗ್ಗೆಯಿಂದಲೇ ಬಸ್​ಗಳ ಓಡಾಟವಿಲ್ಲದ ಕಾರಣ ತಾಲೂಕಿನ ಗ್ರಾಮೀಣ ಪ್ರದೇಶಗಳ ಜನರು, ವ್ಯಾಪಾರಸ್ಥರು ನರಗುಂದದಲ್ಲಿ ಪ್ರತಿ ಬುಧವಾರ ನಡೆಯುವ ಸಂತೆ ಮಾರುಕಟ್ಟೆಗೆ ಬರಲು ತೊಂದರೆ ಅನುಭವಿಸಿದರು. ಕೆಲ ಮಾರ್ಗಗಳಿಗೆ ನಿಲ್ಲಿಸಿದ್ದ ಟಂಟಂ, ಗೂಡ್ಸ್ ವಾಹನಗಳಲ್ಲಿ ಜನರು ಪ್ರಯಾಣಿಸಲು ಹಿಂದೇಟು ಹಾಕಿದ್ದು ಕಂಡುಬಂತು. ಹೀಗಾಗಿ, ಕೆಲವೊಬ್ಬರು ತಮ್ಮ ವಾಹನಗಳ ಸಮೇತ ಮರಳಿ ಮನೆಗೆ ತೆರಳಿದರು. ಮುಂಜಾಗ್ರತೆ ಕ್ರಮವಾಗಿ ನರಗುಂದ ಬಸ್ ನಿಲ್ದಾಣದಲ್ಲಿ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net