

ವಿಜಯವಾಣಿ ಸುದ್ದಿಜಾಲ ಧಾರವಾಡ
ನೀರು ಸರಬರಾಜು ಹಾಗೂ ನಿರ್ವಹಣೆ ಜವಾಬ್ದಾರಿ ಹೊತ್ತ ಎಲ್ ಆ್ಯಂಡ್ ಟಿ ಕಂಪನಿ 579 ಕಾರ್ಮಿಕರನ್ನು 7 ತಿಂಗಳು ದುಡಿಸಿಕೊಂಡು ಸಂಬಳ ನೀಡದೆ ಅವರ ಜೀವನ ಜತೆಗೆ ಚೆಲ್ಲಾಟ ಆಡುತ್ತಿರುವುದನ್ನು ಖಂಡಿಸಿ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ನೇತೃತ್ವದಲ್ಲಿ ಪಾಲಿಕೆ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನೀರು ಸರಬರಾಜ ವ್ಯವಸ್ಥೆಯನ್ನು ಹು-ಧಾ ಮಹಾನಗರ ಪಾಲಿಕೆಯಿಂದ ಎಲ್ ಆ್ಯಂಡ್ ಟಿಗೆ ವಹಿಸಿದ ದಿನದಿಂದ ಅವಳಿನಗರ ಜನತೆ ನೀರಿಗಾಗಿ ಪರದಾಡುವಂತಾಗಿದೆ. ಇನ್ನು ಕೆಲ ಕಡೆಗಳಲ್ಲಿ ಕಲುಷಿತ ನೀರು ಪೂರೈಸುತ್ತಿದ್ದಾರೆ. ಅನೇಕ ಕಡೆಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದರೂ ಸಂಬಂಧಿಸಿದವರು ಕ್ರಮಕ್ಕೆ ಮುಂದಾಗಿಲ್ಲ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಪಾಲಿಕೆ ಶಿಸ್ತು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸರ್ಕಾರದ ನಿಯಮ ಪ್ರಕಾರ ನೌಕರರನ್ನು ಎಲ್ ಆ್ಯಂಡ್ ಟಿ ಕಂಪನಿ 2 ವರ್ಷ ದುಡಿಸಿಕೊಳ್ಳಬೇಕು. ನಂತರ ನುರಿತ ಹಾಗೂ ಕೌಶಲ ರಹಿತರನ್ನು ಇಚ್ಛಿಸಿದರೆ ಮುಂದುವರೆಸಬಹುದು. ಇಲ್ಲವೆ ಪಾಲಿಕೆಗೆ ಹಸ್ತಾಂತರ ಮಾಡಬಹುದು. ಆದರೆ ಪಾಲಿಕೆ ಆಯುಕ್ತರು ಅಸಹಾಯಕರಾಗಿ ಕೈ ಚೆಲ್ಲಿ ಕುಳಿತಿದ್ದರಿಂದ ಹೋರಾಟ ನಡೆಸುವಂತಾಗಿದೆ. ಕೂಡಲೇ ನೌಕರರನ್ನು ಪುನರ್ ನೇಮಕ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ನಂತರ ಮೇಯರ್ ಈರೇಶ ಅಂಚಟಗೇರಿ ಮೂಲಕ ಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವರಿಗೆ ಮನವಿಪತ್ರ ರವಾನಿಸಿದರು.
ಎಐಸಿಸಿ ಸದಸ್ಯ ದೀಪಕ ಚಿಂಚೋರೆ, ಪಿ.ಎಚ್. ನೀರಲಕೇರಿ, ಪಾಲಿಕೆ ಸದಸ್ಯರಾದ ಶಂಭು ಸಾಲಮನಿ, ಕವಿತಾ ಕಬ್ಬೇರ, ದೀಪಾ ನೀರಲಕಟ್ಟಿ, ಮುಖಂಡರಾದ ಅಜಗರ ಮುಲ್ಲಾ, ಸೂರಜ ಪುಡಕಲಕಟ್ಟಿ, ಜನಜಾಗೃತಿ ಸಂಘದ ಉಪಾಧ್ಯಕ್ಷ ನಾಗರಾಜ ಕಿರಣಗಿ, ನೀರು ಸರಬರಾಜು ನೌಕರರ ಸಂಘದ ಅಧ್ಯಕ್ಷ ವಿ.ಎನ್. ಹಳಕಟ್ಟಿ, ರಾಘವೇಂದ್ರ ಶೆಟ್ಟಿ, ಮಹಾಂತೇಶ ಗೌಡರ, ಮಹೇಶ ಮೇಲಿನಮಠ, ಆನಂದ ಕಾಳಣ್ಣನವರ, ನಿಂಗಪ್ಪ ಸೂರ್ಯವಂಶಿ, ಸಿದ್ದು ಕಳ್ಳಿಮನಿ, ಬಸವರಾಜ ಮುಕ್ಕಾಲ, ವಿವಿಧ ಬಡಾವಣೆಗಳ ನಿವಾಸಿಗಳು, ನೌಕರರ ಕುಟುಂಬಸ್ಥರು, ಇತರರು ಇದ್ದರು.