

ಚಿತ್ರದುರ್ಗ: ಶೋಷಣೆಯ ಬದುಕು ಬಹುಸಂಖ್ಯಾತರದ್ದಾಗಿತ್ತು. ಅವರ ನೋವು ಅರಿಯಲು, ವಿಮೋಚನೆ ನೀಡಲು ಬುದ್ಧ ಸಾಮ್ರಾಜ್ಯವನ್ನು ತ್ಯಜಿಸಿದರು ಎಂದು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
ಹೊರವಲಯದ ಭೋವಿ ಗುರುಪೀಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಜಾಪ್ರಭುತ್ವ ಮತ್ತು ತುರ್ತು ಪರಿಸ್ಥಿತಿ ಕುರಿತ ಸಂವಾದದಲ್ಲಿ ಮಾತನಾಡಿ, ಬುದ್ಧನ ಚಿಂತನೆಗಳು ಸಮಾಜದ ಪರಿವರ್ತನೆಗೆ ಬುನಾದಿಯಾಗಿವೆ ಎಂದರು.
ಭಾರತ ದೇಶವನ್ನು ವಿಶ್ವಗುರು ಆಗಿಸಲು, ಸಂವಿಧಾನದ ಸಮಾನತೆಯ ಆಶಯಗಳು ಈಡೇರಲು ಪ್ರಶ್ನಿಸುವ ಮನೋಭಾವ ಮುಖ್ಯ. ಇಲ್ಲದಿದ್ದರೆ, ಅಭಿವೃದ್ಧಿ, ಅಭಿವ್ಯಕ್ತಿ ಆಗಲಾರದು. ವಿದ್ಯಾವಂತರಾಗಿ ಸಮಾಜಕ್ಕೆ ಮಾದರಿಯಾಗಿ ಜೀವಿಸಬೇಕು ಎಂದು ಸಲಹೆ ನೀಡಿದರು.
ಸದೃಢ ರಾಷ್ಟ್ರ ನಿರ್ಮಾಣಕ್ಕೆ ಸಂವಿಧಾನವನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು. ಪ್ರಜೆಗಳನ್ನು ಎಂದಿಗೂ ತುಳಿಯುವ ಕೆಲಸವಾಗಬಾರದು ಎಂದು ಹೇಳಿದರು.
ಪತ್ರಕರ್ತ ವಿ. ನಾಗರಾಜ್ ಮಾತನಾಡಿ, ಗುಜರಾತ್, ಬಿಹಾರದಲ್ಲಿ ಉಂಟಾದ ಹರಾಜಕತೆ ಪರಿಸ್ಥಿತಿ ಮತ್ತು ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿಯನ್ನು ಭಾರತದಲ್ಲಿ ಜಾರಿ ಮಾಡಲಾಯಿತು. ವ್ಯವಸ್ಥೆಯಲ್ಲಿ ವಿರೋಧ ಪಕ್ಷದವರ ಟೀಕೆಗೆ ಹೆಚ್ಚು ಒಳಗಾಗಬೇಕಾಯಿತು ಎಂದು ತಿಳಿಸಿದರು.
ಕರ್ನಾಟಕದಲ್ಲಿ ದೇವರಾಜ್ ಅರಸು ಅವರು ಸಿಎಂ ಆಗಿದ್ದರಿಂದ ತುರ್ತು ಪರಿಸ್ಥಿತಿಯ ಪರಿಣಾಮ ಭಿನ್ನವಾಗಿತ್ತು. ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಿ ವಿವಿಧ ಯೋಜನೆಗಳನ್ನು, ಬಡತನ ನಿವಾರಣೆಗೆ 20 ಅಂಶಗಳ ಕಾರ್ಯಕ್ರಮ ರೂಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಭೂ-ಒಡೆತನ, ಜೀತಪದ್ಧತಿ ನಿರ್ಮೂಲನೆ ಮಾಡಿದರು. ಹಿಂದುಳಿದ, ಅಲ್ಪಸಂಖ್ಯಾತ ವರ್ಗಗಳಿಗೆ ಸಾಮಾಜಿಕ ಸ್ವಾತಂತ್ರೃ ಕಲ್ಪಿಸಿಕೊಟ್ಟರು. ಶಿಕ್ಷಣ, ಉದ್ಯೋಗದಲ್ಲಿ ಅವಕಾಶ ಒದಗಿಸಲು ಶ್ರಮಿಸಿದರು. ತುರ್ತು ಪರಿಸ್ಥಿತಿಯನ್ನು ಉತ್ತಮ ಕಾರ್ಯಗಳಿಗೆ ಉಪಯೋಗಿಸಿಕೊಂಡರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ, ಕುಂಬಾರ ಗುಂಡಯ್ಯ ಸ್ವಾಮೀಜಿ, ಪತ್ರಕರ್ತರಾದ ಎಂ.ಎಸ್. ರಾಜೇಂದ್ರಕುಮಾರ್, ಎ.ಎಸ್. ನಾರಾಯಣಸ್ವಾಮಿ, ನಿವೃತ್ತ ಕಾರ್ಮಿಕಾಧಿಕಾರಿ ಎಂ. ಬಾಲಕೃಷ್ಣ, ಭೋವಿ ಗುರುಪೀಠದ ಸಿಇಒ ಗೌನಹಳ್ಳಿ ಗೋವಿಂದಪ್ಪ ಇತರರಿದ್ದರು.