ನೋಬೆಲ್ ಪ್ರಶಸ್ತಿಗೆ ಮೋದಿ ಅರ್ಹರು

NDA
Published on

ಚಿತ್ರದುರ್ಗ: ಬರದ ನಾಡು ಅಭಿವೃದ್ಧಿ ಕಾಣಲು ಚಿತ್ರದುರ್ಗ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಬೆಂಬಲಿಸಿ. ಸುಡು ಬಿಸಿಲು ಹೊರತುಪಡಿಸಿ, ಬೆಳಗ್ಗೆ ಮತ್ತು ಸಂಜೆ ಮನೆ-ಮನೆಗೆ ಭೇಟಿ ನೀಡಿ ಮತಯಾಚಿಸಿ. ಪ್ರತಿ ಬೂತ್‌ನಲ್ಲೂ 370 ಮತ ಹೆಚ್ಚಿಸಿ ಎಂದು ಎಂಎಲ್ಸಿ ಎನ್.ರವಿಕುಮಾರ್ ಕಾರ್ಯಕರ್ತರಿಗೆ ಸಲಹೆ ನೀಡಿದರು.

ಉಮಾಪತಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು.

ಮುಧೋಳ ತಾಲೂಕಿನಲ್ಲಿ ಗೋವಿಂದ ಕಾರಜೋಳ ಅವರಿಂದ ಸರ್ವಾಂಗೀಣ ಅಭಿವೃದ್ಧಿ ಆಗಿದೆ. ಅಲ್ಲಿ ಸಂಪೂರ್ಣ ನೀರಾವರಿ ಮಾಡಿದ್ದಾರೆ. ರಾಜ್ಯ ಸರ್ಕಾರ ಕೇಂದ್ರಕ್ಕೆ ಸೂಕ್ತ ದಾಖಲೆ ನೀಡದ ಕಾರಣ ಭದ್ರಾ ಮೇಲ್ದಂಡೆ ಯೋಜನೆಯ 5,300 ಕೋಟಿ ರೂ. ಬಿಡುಗಡೆಯಾಗಿಲ್ಲ. ಕ್ಷೇತ್ರದ ಮತದಾರರು ಅವರಿಗೆ ಆಶೀರ್ವದಿಸಿದರೆ, ಹಂತ-ಹಂತವಾಗಿ ತರುವಲ್ಲೂ ಪ್ರಾಮಾಣಿಕವಾಗಿ ಶ್ರಮಿಸಲಿದ್ದಾರೆ ಎಂದರು.

ಭರಮಸಾಗರದ ಕೋಗುಂಡೆ ಮಂಜಣ್ಣ ಕುಟುಂಬ 120 ಎಕರೆ ಜಮೀನಿಗೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಿದ್ದು, 27ಲಕ್ಷ ರೂ. ವಿಮಾ ಹಣ ಬಂದಿದೆ. ಇಲ್ಲಿನ ಲೋಕಸಭಾ ಕ್ಷೇತ್ರದ 3.5 ಲಕ್ಷ ಜನರ ಖಾತೆಗೆ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ 6 ಸಾವಿರ ರೂ. ಜಮಾ ಆಗಿದೆ. ಇದಕ್ಕೆ ಕಾರಣ ವಿಶ್ವ ಕಂಡ ಅಪರೂಪಕ್ಕೆ ಅಪರೂಪದ ನಾಯಕ ಪ್ರಧಾನಿ ನರೇಂದ್ರ ಮೋದಿ. ಅಭಿವೃದ್ಧಿ ವಿಷಯದಲ್ಲಿ ಅವರಿಗೆ ನೋಬೆಲ್ ಪ್ರಶಸ್ತಿ ನೀಡಬೇಕು ಎಂದರು.

ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಬರಪೀಡಿತ ಈ ಕ್ಷೇತ್ರದಲ್ಲಿ ಅತಿ ಹೆಚ್ಚು ಚೆಕ್ ಡ್ಯಾಂ ನಿರ್ಮಿಸಿದ ಕೀರ್ತಿ ಹಿಂದೆ ಸಣ್ಣ ನೀರಾವರಿ ಸಚಿವರಾಗಿದ್ದ ಕಾರಜೋಳ ಅವರಿಗೆ ಸಲ್ಲುತ್ತದೆ. ಸಮಾಜ ಕಲ್ಯಾಣ ಸಚಿವರಾಗಿದ್ದ ಅವಧಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಸಿ.ಸಿ.ರಸ್ತೆ ನಿರ್ಮಾಣಕ್ಕಾಗಿ ಹೆಚ್ಚು ಅನುದಾನ ನೀಡಿದರು. ಎಚ್.ಡಿ.ದೇವೇಗೌಡರು ಸಿಎಂ, ಪಿಎಂ ಆಗಿದ್ದ ಅವಧಿಯಲ್ಲಿ ನೀರಾವರಿಗಾಗಿ ರಾಜ್ಯಕ್ಕೆ ನೀಡಿದ ಕೊಡುಗೆ ಮತ್ತಿನ್ಯಾರು ಕೊಟ್ಟಿಲ್ಲ. ಮೈತ್ರಿ ಪಕ್ಷಗಳ ಅಭಿವೃದ್ಧಿ ಕೆಲಸ ಮುಂದಿಟ್ಟುಕೊಂಡು ಮತಯಾಚಿಸಿ ಎಂದು ಸಲಹೆ ನೀಡಿದರು.

ಥೀಮ್ ಪಾರ್ಕ್‌ಗೆ ಒತ್ತು ನೀಡಿ: ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಮಾತನಾಡಿ, ರಾಜ್ಯದ ಮತ್ತು ದೇಶದ ಉಜ್ವಲ ಭವಿಷ್ಯಕ್ಕಾಗಿ ಎರಡೂ ಪಕ್ಷದವರು ಭಿನ್ನಾಭಿಪ್ರಾಯ ಬದಿಗಿಟ್ಟು ಅಭ್ಯರ್ಥಿ ಪರ ಮತಯಾಚಿಸೋಣ ಎಂದರು. ಬಿಜೆಪಿ ಕಾರ್ಯಕರ್ತರೊಂದಿಗೆ ವೈಮನಸ್ಸು ನಮ್ಮಲ್ಲಿಲ್ಲ. ಮದಕರಿನಾಯಕ ಥೀಮ್ ಪಾರ್ಕ್ ನಿರ್ಮಾಣಕ್ಕೆ ಕಾರಜೋಳ ಅವರು ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ, ಮಾಜಿ ಪ್ರಧಾನಿ ದೇವೇಗೌಡರು ಎನ್‌ಡಿಎ ಜೊತೆ ಕೈಜೋಡಿಸಿದ್ದು, ರಾಜ್ಯದಲ್ಲಿ ಬಿಜೆಪಿಗೆ ಆನೆಬಲ ಬಂದಂತಾಗಿದೆ. ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧನಾಗಿ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇನೆ ಎಂದರು.

ಜೆಡಿಎಸ್ ಅಧ್ಯಕ್ಷ ಜಯಣ್ಣ ಮಾತನಾಡಿ, ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿಯನ್ನೇ ಈವರೆಗೂ ಘೋಷಿಸಿಲ್ಲ. ದೇಶದ ರಕ್ಷಣೆ, ಭದ್ರತೆ, ಅಭಿವೃದ್ಧಿಗಾಗಿ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸಲು ಕಾರ್ಯಪ್ರವೃತ್ತರಾಗೋಣ. ಬಿಜೆಪಿ-ಜೆಡಿಎಸ್ ರಾಜ್ಯಕ್ಕೆ ನೀಡಿದ ಕೊಡುಗೆ ಜನರಿಗೆ ತಿಳಿಸುವ ಕೆಲಸ ಮಾಡೋಣ ಎಂದು ಹೇಳಿದರು.

ಎಂಎಲ್ಸಿ ಕೆ.ಎಸ್.ನವೀನ್ ಮಾತನಾಡಿ, ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲು ಬಿಡಬಾರದೆಂದು ಚೀನಾ ಸೇರಿ ವಿರೋಧಿ ರಾಷ್ಟ್ರಗಳು ಷಡ್ಯಂತ್ರ ರೂಪಿಸಿವೆ. ಭಾರತವಷ್ಟೇ ಅಲ್ಲ, ವಿಶ್ವ ಮೆಚ್ಚುವ ರೀತಿಯಲ್ಲಿ ನಮ್ಮ ಪಿಎಂ ಆಡಳಿತ ನಡೆಸಿದ್ದಾರೆ. ದೇಶ ಭಕ್ತ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಎಂದು ಮತದಾರರಲ್ಲಿ ಮನವಿ ಮಾಡಿದರು.

ಮೈತ್ರಿ ಅಭ್ಯರ್ಥಿ ಗೋವಿಂದ ಎಂ ಕಾರಜೋಳ, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಮುಖಂಡರಾದ ಲಿಂಗಮೂರ್ತಿ, ಜಿ.ಬಿ.ಶೇಖರ್, ಡಾ.ಸಿದ್ಧಾರ್ಥ್ ಗುಂಡಾರ್ಪಿ, ಜಿ.ಟಿ.ಸುರೇಶ್, ಸಣ್ಣ ತಿಮ್ಮಪ್ಪ, ಸಂಪತ್‌ಕುಮಾರ್, ಗೋಪಾಲಸ್ವಾಮಿ ನಾಯಕ, ಪ್ರತಾಪ್ ಜೋಗಿ, ವೀರಣ್ಣ, ಹನುಮಂತರಾಯಪ್ಪ, ನವೀನ್ ಚಾಲುಕ್ಯ, ಜಗದೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net