

ಬಳ್ಳಾರಿ : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯಗೆ ನೀಡಿರುವ ನೋಟಿಸ್‌ನ್ನು ವಾಪಾಸ್ ಪಡೆಯುವ ವಿಶ್ವಾಸವಿದೆ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಹೇಳಿದರು.
ಸಂಡೂರಿನ ತಾಲೂಕಿನ ಜಿಂದಾಲ್‌ನಲ್ಲಿ ನಡೆದ ಎಡುಕಾನ್ ಶಿಕ್ಷಣ ಸಮಾವೇಶ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯಪಾಲರು ಸಾಂವಿಧಾನಿಕ ಹುದ್ದೆಯಲ್ಲಿ ಇರುವುದರಿಂದ, ಉತ್ತಮವಾದ ನಿರ್ಧಾರ ತೆಗೆದುಕೊಳ್ಳುವರು ಎಂಬ ನಂಬಿಕೆಯಿದೆ. ಟಿ.ಜೆ. ಅಬ್ರಹಾಂ ಎಂಬ ವ್ಯಕ್ತಿಯ ದೂರು ನೀಡಿದ ಹಿನ್ನಲೆ ರಾಜ್ಯಪಾಲರು ಏಕಾಏಕಿ ನೋಟಿಸ್ ನೀಡಿದ್ದಾರೆ. ಈ ಹಿಂದೆ ಸುಪ್ರೀಂ ಕೋರ್ಟ್ ಟಿ.ಜೆ. ಅಬ್ರಹಾಂನನ್ನು ಬೇರೊಂದು ಪ್ರಕರಣದಲ್ಲಿ 25 ಲಕ್ಷ ದಂಡ ಹಾಕಿ, ಛೀಮಾರಿ ಹಾಕಿತ್ತು. ಅಂತಹ ವ್ಯಕ್ತಿಯ ದೂರು ನಂಬಿ ನೋಟಿಸ್ ನೀಡಿರುವುದು ವಿಪರ್ಯಾಸವಾಗಿದೆ. ರಾಜ್ಯದಲ್ಲಿ ಹಲವರ ಮೇಲೆ ನಾನಾ ಪ್ರಕರಣಗಳಿವೆ, ಅವರ ಎಲ್ಲರ ಮೇಲೂ ಗವರ್ನರ್ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆಯೇ ಎಂದು ಪ್ರಶ್ನಿಸಿದರು. ಮುಡಾ ಹಗರಣ ಖಂಡಿಸಿ ಬಿಜೆಪಿ ಹಾಗೂ ಜೆಡಿಎಸ್ ಸೇರಿ ಮೈಸೂರಿಗೆ ಪಾದಯಾತ್ರೆ ಮಾಡುತ್ತಿರುವ ಎಲ್ಲ ನಾಯಕರ ಮೇಲೆ ಪ್ರಕರಣಗಳು ದಾಖಲಾಗಿವೆ. ಬಿಜೆಪಿ ನಾಯಕರಿಗೆ ಒಂದು ಕೆಟ್ಟ ರೋಗವಿದೆ. ಅದಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ. ಸಿಎಂ ನೋಟಿಸ್ ನೀಡುವ ವಿಷಯದಲ್ಲಿ ಬಿಜೆಪಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ. ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವ ನಾಯಕತ್ವವನ್ನು ನಾವು ಉಳಿಸಿಕೊಳ್ಳಬೇಕಿದೆ. ಆದ್ದರಿಂದ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಜನಾಂದಲೋನ ಕಾರ್ಯಕ್ರಮ ಮಾಡಲಾಗುವುದು ಎಂದು ಎಚ್ಚರಿಸಿದರು. ಈಗಾಗಲೇ ಸಿಎಂಗೆ ನೋಟಿಸ್ ನೀಡಿರುವ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಲಾಗಿದೆ. ಬಿಜೆಪಿಯಿಂದ ಪ್ರಜಾಪ್ರಭುತ್ವ ಕೊಲೆ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು. ಮುಂದಿನ ದಿನಗಳಲ್ಲಿ ಸ್ವತಃ ಸಿಎಂ ಸಿದ್ದರಾಮಯ್ಯನವರೇ ರಾಜ್ಯಪಾಲರ ನೋಟಿಸ್‌ಗೆ ಉತ್ತರ ನೀಡಲಿದ್ದಾರೆ. ಮುಡಾ ನಿವೇಶನ ಹಂಚಿಕೆ ವೇಳೆ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿತ್ತು. ಈಗ ವಿಷಯ ಇಟ್ಟುಕೊಂಡು ರಾಜಕೀಯ ಮಾಡಲು ಹೊರಟಿದೆ, ರಾಜ್ಯದ ಜನರು ಎಲ್ಲ ಗಮನಿಸುತ್ತಿದ್ದು, ಅವರೇ ಉತ್ತರ ಕೊಡಲಿದ್ದಾರೆ ಎಂದರು.