ನೋಟಿಸ್ ನೀಡಿಯೇ ಸದಸ್ಯರ ಉಚ್ಚಾಟನೆ

basavraj jabshetty
Published on

ಬೀದರ್: ಪಕ್ಷ ವಿರೋಧಿ ಚಟುವಟಿಕೆ ಕುರಿತು ನೋಟಿಸ್ ನೀಡಿಯೇ ಜಿಲ್ಲಾ ಪಂಚಾಯಿತಿಯ ಕಾಂಗ್ರೆಸ್‌ನ 11 ಜನ ಸದಸ್ಯರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ತಿಳಿಸಿದ್ದಾರೆ.

ಪಕ್ಷದ ಕೆಲ ಸದಸ್ಯರು ಬಿಜೆಪಿ ಸದಸ್ಯರ ಜತೆಗೆ ಕೈಜೋಡಿಸಿ ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಪಂಡಿತರಾವ್ ಚಿದ್ರಿ ಹಾಗೂ ಉಪಾಧ್ಯಕ್ಷ ಲಕ್ಷ್ಮಣರಾವ್ ಬುಳ್ಳಾ ಅವರು ದೂರು ನೀಡಿದ್ದರು. ನಂತರ ವಿಷಯವನ್ನು ಪಕ್ಷ ಗಂಭೀರವಾಗಿ ಪರಿಗಣಿಸಲಿದೆ ಎಂದು ಸದಸ್ಯರಿಗೆ ಎಚ್ಚರಿಕೆಯನ್ನೂ ಕೊಡಲಾಗಿತ್ತು. ಈ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡಿರಲಿಲ್ಲ ಎನ್ನುವ ಉಚ್ಚಾಟಿತ ಸದಸ್ಯರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಹಿಂದಿನ ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧದ ಅವಿಶ್ವಾಸ ನಿರ್ಣಯವು ಪಕ್ಷದ ನಿರ್ಧಾರವಾಗಿತ್ತು. ಆದರೆ, ಗೀತಾ ಚಿದ್ರಿ ಹಾಗೂ ಲಕ್ಷ್ಮಣರಾವ್ ಬುಳ್ಳಾ ಅವರ ವಿರುದ್ಧದ ಅವಿಶ್ವಾಸ ನಿರ್ಣಯ ವರಿಷ್ಠರ ತೀರ್ಮಾನ ಆಗಿರಲಿಲ್ಲ. ಉಚ್ಚಾಟಿತರು ತಮ್ಮ ಸ್ವಾರ್ಥ ಸಾಧನೆಗಾಗಿ ವಿಪ್ ಉಲ್ಲಂಘಿಸಿ ಬಿಜೆಪಿ ಸದಸ್ಯರೊಂದಿಗೆ ಸೇರಿ ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ ಎಂದು ತಿಳಿಸಿದ್ದಾರೆ.

ಹಿಂದೆ ಹಾಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಕುರಿತು ಕೆಲ ಸದಸ್ಯರು ದೂರು ನೀಡಿದಾಗ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲು ಸೂಚಿಸಲಾಗಿತ್ತು. ಪಕ್ಷದಲ್ಲಿ ಎಲ್ಲವೂ ಸರಿಯಾಗಿಯೇ ಇದೆ. ಯಾವುದೇ ಅವ್ಯವಸ್ಥೆ ಇಲ್ಲ. ಹೀಗಾಗಿ ಸರಿಪಡಿಸುವ ಪ್ರಶ್ನೆ ಉದ್ಭವಿಸದು. ಉಚ್ಚಾಟಿತ ಸದಸ್ಯರೇ ಅವ್ಯವಸ್ಥೆ ಸೃಷ್ಟಿಸಲು ಪ್ರಯತ್ನಿಸಿದರು ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ಶತಮಾನದ ಇತಿಹಾಸ ಹೊಂದಿರುವ ಪಕ್ಷವಾಗಿದೆ. ಇದು, ಯಾರ ಮನೆಯ ಪಕ್ಷವೂ ಅಲ್ಲ. ಪಕ್ಷ ಟಿಕೆಟ್ ಕೊಟ್ಟಿದ್ದರಿಂದಲೇ ಉಚ್ಚಾಟಿತರು ಸದಸ್ಯರಾಗಿ ಆಯ್ಕೆಯಾಗಿದ್ದರು. ಅಧಿಕಾರ ಅನುಭವಿಸಿದರು. ಎಲ್ಲ ಗೊತ್ತಿದ್ದೂ ಪಕ್ಷ ನಿಮ್ಮ ಮನೆಯ ಆಸ್ತಿಯೇ ಎಂದು ಪ್ರಶ್ನಿಸುತ್ತಿರುವುದು ಸರಿಯಲ್ಲ. ಕಾಂಗ್ರೆಸ್ ನಲ್ಲಿ ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಎಂದು ಹೇಳಿದ್ದಾರೆ.

ತಮ್ಮ ಉದ್ದೇಶ ಈಡೇರಿಸಿಕೊಳ್ಳಲು ಪಕ್ಷದ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನೇ ಗಾದಿಯಿಂದ ಕೆಳಗಿಳಿಸಲು ಅವಿಶ್ವಾಸ ನಿರ್ಣಯ ಮಂಡಿಸಿದ ಸದಸ್ಯರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹಾಗೂ ತಮ್ಮ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕು ಇಲ್ಲ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net