ನೋಂದಣಿಗೆ ಆಧಾರ್‌ಕಾರ್ಡ್ ಮಾನ್ಯವಲ್ಲ

20 YERRISWAMY 03
Published on

ಬಳ್ಳಾರಿ : ಜಿಲ್ಲಾವಾರು ಗರ್ಭಿಣಿಯರ ವಿವರ ದಾಖಲಿಸುವಂತಹ ಆರ್‌ಸಿಎಚ್ ಪೋರ್ಟಲ್ನಲ್ಲಿ ಕೇವಲ ಆಧಾರ್‌ಕಾರ್ಡ ಮಾತ್ರ ಮಾನ್ಯತೆ ಅಲ್ಲ, ಬದಲಾಗಿ ಜನನ ಮತ್ತು ಶಾಲಾ ದೃಢೀಕರಣ ಪ್ರಮಾಣ ಪತ್ರ ಪರಿಗಣಿಸಬೇಕು ಎಂದು ರಾಜ್ಯ ಮಕ್ಕಳ ಆಯೋಗದ ಸದಸ್ಯ ಶಶಿಧರ ಕೋಸಂಬೆ ಸ್ಪಷ್ಟಪಡಿಸಿದರು.
ನಗರದ ಜಿಪಂ ನಜೀರ ಸಭಾಂಗಣದಲ್ಲಿ ಮಕ್ಕಳ ರಕ್ಷಣೆ ವ್ಯವಸ್ಥೆ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಶನಿವಾರ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಶೇ.30 ರಷ್ಟು ಭ್ರೂಣಹತ್ಯೆ ಪ್ರಕರಣಗಳು ಕಂಡುಬಂದಿರುವ ಹಿನ್ನಲೆಯಲ್ಲಿ ಸಿಎಂ ರಾಜ್ಯದ ಎಲ್ಲ ಡಿಸಿ, ಜಿಪಂ ಸಿಇಒಗಳೊಂದಿಗೆ ಸಭೆ ನಡೆಸಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅದರಂತೆ ಜಿಲ್ಲೆಯ ಎಲ್ಲ ಆಸ್ಪತ್ರೆಗಳಲ್ಲಿ ನೋಂದಣಿ ಫಲಕ, ಹೊರರೋಗಿಗಳ ನೋಂದಣಿ ಪುಸ್ತಕ, ಸ್ಕ್ಯಾನಿಂಗ್ ದರ ಹಾಗೂ ಇತರೆ ಮಾಹಿತಿಯನ್ನು ಫಲಕ ಪ್ರದರ್ಶಿಸಬೇಕು ಎಂದರು. ಜಿಲ್ಲೆಯಲ್ಲಿ ಕಳೆದ ಎರಡು ವರ್ಷದಲ್ಲಿ 156 ತಾಯಿಯಂದಿರು ಹೆರಿಗೆ ಸಮಯದಲ್ಲಿ ಮೃತರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 7936 ಬಾಲ ಗರ್ಭಿಣಿಯರು ಕಂಡುಬಂದಿದ್ದಾರೆ. ಕಳೆದ ಮೂರು ವರ್ಷದಲ್ಲಿ 2349 ಜನ ಬಾಲ ಗರ್ಭೀಣಿಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 76 ಸ್ಕ್ಯಾನಿಂಗ್ ಸೆಂಟರ್‌ಗಳಿದ್ದು, ಕಳೆದ ಮೂರು ತಿಂಗಳಲ್ಲಿ 74 ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಭೇಟಿ ನೀಡಿ ಅಲ್ಲಿನ ನ್ಯೂನ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ. ಪ್ರತಿ ತಿಂಗಳಿಗೊಮ್ಮೆ ಜಿಲ್ಲಾ ಆರೋಗ್ಯ ಸಮನ್ವಯ ಸಭೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣ ಅನುಷ್ಠಾನಾಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ ಸಭೆಗೆ ತಿಳಿಸಿದರು.
ಜಿಲ್ಲೆಯಲ್ಲಿ 18 ವರ್ಷದೊಳಗಿನ 64 ಮಕ್ಕಳಲ್ಲಿ ಎನ್‌ಎಸ್1 ಪಾಸಿಟವ್ ಆಗಿದ್ದು, ಅದರಲ್ಲಿ 58 ಮಕ್ಕಳು ಗುಣಮುಖರಾಗಿದ್ದಾರೆ. ಇನ್ನುಳಿದ 6 ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಿಎಚ್‌ಒ ಡಾ.ವೈ.ರಮೇಶಬಾಬು ತಿಳಿಸಿದರು.
ಜಿಲ್ಲೆಯಲ್ಲಿ 153 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು, ಅದರಲ್ಲಿ 110 ಮಕ್ಕಳನ್ನು ಗುರುತಿಸಿ ಪೋಷಕರ ಮನವೊಲಿಸಿ ಮಕ್ಕಳನ್ನು ಮುಖ್ಯವಾಹಿನಿಗೆ ತರಲಾಗಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿ ಸಭೆಗೆ ತಿಳಿಸಿದರು.
ಶಾಲೆಗೆ ಸಂಚರಿಸುವ ಮಕ್ಕಳ ಸುರಕ್ಷತೆಗಾಗಿ ರಾಜ್ಯ ಸರ್ಕಾರವು ಸ್ಕೂಲ್ ಕ್ಯಾಬ್ ಎಂಬ ಸುತ್ತೋಲೆ ಹೊರಡಿಸಿದ್ದು, ಶಾಲೆಗೆ ಕರೆದೊಯ್ಯುವ ವಾಹನ ಚಾಲಕರ ವಾಹನ ನೋಂದಣಿ, ಇತರೆ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತದೆ. ಇದಕ್ಕಾಗಿ ಕರ್ನಾಟಕ ಮೋಟಾರು ವಾಹನ ಸಾರಿಗೆ ಕಾಯ್ದೆ ಸಮಿತಿಯನ್ನು ರಚಿಸಲಾಗುತ್ತದೆ. ಈ ಕುರಿತು ಮಾಹಿತಿ ಒದಗಿಸುವ ಕಾರ್ಯ ಮಾಡಬೇಕು ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಶಶಿಧರ ಕೋಸಂಬೆ ನಿರ್ದೇಶನ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net