ನೋಂದಣಿಗಾಗಿ ಸಾಲುಗಟ್ಟಿ ನಿಂತ ರೈತರು

22BTP04
ಬೆಟ್ಟದಪುರದ ಎಪಿಎಂಸಿ ಆವರಣದಲ್ಲಿರುವ ರಾಗಿ ಖರೀದಿ ಕೇಂದ್ರದ ಮುಂದೆ ರೈತರು ನೋಂದಣಿಗಾಗಿ ಸಾಲಿನಲ್ಲಿ ನಿಂತಿರುವುದು.
Published on

ಬೆಟ್ಟದಪುರ: ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆದಿರುವ ರಾಗಿ ಮತ್ತು ಭತ್ತವನ್ನು ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಮಾಡಲು ನೋಂದಣಿ ಆರಂಭಿಸಿರುವ ಹಿನ್ನೆಲೆಯಲ್ಲಿ ಬೆಟ್ಟದಪುರದ ಎಪಿಎಂಸಿ ಆವರಣದಲ್ಲಿ ನಿತ್ಯ ರೈತರು ಸಾಲುಗಟ್ಟಿ ನಿಲ್ಲುತ್ತಿರುವುದು ಕಂಡುಬರುತ್ತಿದೆ.

ಪಿರಿಯಾಪಟ್ಟಣ ತಾಲೂಕಿನ ಗಡಿ ವ್ಯಾಪ್ತಿಯಲ್ಲಿರುವ ಶ್ಯಾನುಭೋಗನಹಳ್ಳಿ, ಕಣಗಾಲು, ಆವರ್ತಿ, ಕಿತ್ತೂರು, ಕೌಲನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಂದ ರೈತರು ನೋಂದಣಿಗಾಗಿ ಆಗಮಿಸುತ್ತಿದ್ದಾರೆ. ಡಿ.15ರಿಂದ ಅತಿ ಸಣ್ಣ ಮತ್ತು ಸಣ್ಣ ರೈತರಿಗೆ ನೋಂದಣಿಗೆ ಅವಕಾಶ ಮಾಡಿಕೊಡಲಾಗಿದೆ. ಚುಮುಚುಮು ಚಳಿಯಲ್ಲೂ ಬರುವ ರೈತರು ಹಾಗೂ ಮಹಿಳಾ ರೈತರು ತಿಂಡಿ, ಊಟದೊಂದಿಗೆ ತಮ್ಮ ಸರದಿಗಾಗಿ ಸಾಲಿನಲ್ಲಿ ಕಾಯುತ್ತಾರೆ. ಸರ್ವರ್ ಸಮಸ್ಯೆ ಕಾಡುತ್ತಿದ್ದರೂ ರೈತರು ತಾಳ್ಮೆಯಿಂದ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ.

ಈ ವ್ಯಾಪ್ತಿಯ ವಿವಿಧೆಡೆ ಹತ್ತು ದಿನಗಳಿಂದ ಭತ್ತ ಹಾಗೂ ರಾಗಿ ಕೊಯ್ಲು ಆರಂಭವಾಗಿದ್ದು, ಸರತಿ ಸಾಲಿನಲ್ಲಿ ಕಾಯುತ್ತ ನಿಲ್ಲುವುದರಿಂದ ಕೃಷಿ ಚಟುವಟಿಕೆಗೆ ರೈತರು ಸಮಸ್ಯೆ ಎದುರಿಸುವಂತಾಗಿದೆ. ಅಧಿಕಾರಿಗಳು ತಮಗೆ ಬೇಕಾದವರಿಗೆ ಬೇಗ ನೋಂದಣಿ ಮಾಡಿಕೊಡುತ್ತಿದ್ದು, ಅರ್ಹ ರೈತರಿಗೆ ಅವಕಾಶ ಮಾಡಿಕೊಡಬೇಕು ಎಂದು ಸ್ಥಳೀಯ ರೈತರು ಒತ್ತಾಯಿಸಿದ್ದಾರೆ.

ತಾಲೂಕಿನಲ್ಲಿ ಪ್ರಮುಖ ವಾರ್ಷಿಕ ಬೆಳೆಯಾಗಿರುವ ರಾಗಿಯನ್ನು ಬೆಟ್ಟದಪುರ ಹಾಗೂ ಹಾರನಹಳ್ಳಿ ಹೋಬಳಿ ವ್ಯಾಪ್ತಿಯ ರೈತರು ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಈ ಬಾರಿ ಖರೀದಿ ಏಜೆನ್ಸಿಯಾಗಿ ಕರ್ನಾಟಕ ಕೃಷಿ ಮಾರಾಟ ಮಂಡಳಿಯನ್ನು ಸರ್ಕಾರ ನೇಮಕ ಮಾಡಿದೆ. ಸರ್ಕಾರ ಬೆಂಬಲ ಬೆಲೆ ಕ್ವಿಂಟಾಲ್‌ಗೆ 3578ರೂ. ನಂತೆ ಪ್ರತಿ ರೈತನಿಂದ ಗರಿಷ್ಠ 20 ಕ್ವಿಂಟಾಲ್ ಕೊಂಡುಕೊಳ್ಳಲು ಆದೇಶಿಸಿದೆ.

ಭತ್ತ ಸಾಮಾನ್ಯ 2040 ರೂ. ಹಾಗೂ ಭತ್ತ ಎ-ಗ್ರೇಡ್ 2060 ರೂ.ನಂತೆ ಪ್ರತಿ ರೈತನಿಂದ ಗರಿಷ್ಠ 40 ಕ್ವಿಂಟಾಲ್‌ನಷ್ಟು ಖರೀದಿಸಬಹುದಾಗಿದೆ. ಜನವರಿಯಿಂದ ಮಾರ್ಚ್ ಕೊನೆಯವರೆಗೆ ಖರೀದಿ ನಡೆಯಲಿದೆ. ಬೆಟ್ಟದಪುರ ಖರೀದಿ ಕೇಂದ್ರದಲ್ಲಿ ಡಿ.15ರಿಂದ ಡಿ.21ರವರೆಗೆ ಸುಮಾರು 6219 ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ.

ದೊಡ್ಡ ಹಿಡುವಳಿದಾರರಿಗೆ ಅವಕಾಶವಿಲ್ಲ: ಐದು ಎಕರೆಗಿಂತ ಹೆಚ್ಚು ಜಮೀನು ಇರುವ ರೈತರಿಗೆ ಈ ಬಾರಿಯೂ ನೋಂದಣಿಗೆ ಅವಕಾಶ ನೀಡಿಲ್ಲ. ಕಳೆದ ಬಾರಿಯೂ ಇದೇ ರೀತಿ ಮಾಡಲಾಗಿತ್ತು. ದೊಡ್ಡ ಹಿಡುವಳಿದಾರ ರೈತರಿಗೆ ಈ ಬಾರಿ ಅವಕಾಶ ಸಿಗಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಕೆಲವರಿಗೆ ಪಹಣಿಗಳಲ್ಲಿ ರಾಗಿ ಎಂಬುದಾಗಿ ನಮೂದು ಮಾಡದೆ ಕೈ ಬಿಟ್ಟಿರುವುದರಿಂದ ಹಾಗೂ ಫ್ರೂಟ್ ಐಡಿ ಎಡವಟ್ಟುಗಳಿಂದ ನೋಂದಣಿಗೆ ಸಮಸ್ಯೆಯಾಗುತ್ತಿದೆ. ಹಾಗಾಗಿ ಸ್ಥಳದಲ್ಲಿಯೇ ಸಂಬಂಧಿಸಿದ ಅಧಿಕಾರಿಗಳು ಸಮಸ್ಯೆ ಬಗೆಹರಿಸಿಕೊಡಬೇಕು ಎಂದು ಕೆಲ ರೈತರು ಮನವಿ ಮಾಡಿದ್ದಾರೆ.

ಬೆಟ್ಟದಪುರ ಖರೀದಿ ಕೇಂದ್ರದಲ್ಲಿ ನೋಂದಣಿ ಸಂದರ್ಭದಲ್ಲಿ ರೈತರಿಗೆ ಸರಿಯಾದ ಸೇವೆ ದೊರಕುತ್ತಿಲ್ಲ. ನಾವು ಮುಂಜಾನೆ ಮೂರು ಗಂಟೆಯಿಂದ ಸಾಲಿನಲ್ಲಿ ಬಂದು ನಿಲ್ಲುತ್ತಿದ್ದೇವೆ. ಆದರೆ ಅಧಿಕಾರಿಗಳು ಮಧ್ಯವರ್ತಿಗಳಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ಎರಡೂ-ಮೂರು ದಿನ ಕಳೆದರೂ ಅನೇಕರು ಇನ್ನೂ ನೋಂದಣಿ ಮಾಡಿಸಿಕೊಂಡಿಲ್ಲ. ಹೆಚ್ಚುವರಿ ಕಂಪ್ಯೂಟರ್ ಸೌಲಭ್ಯ ನೀಡಿ, ನಿಜವಾದ ರೈತರಿಗೆ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಬೇಕು.
ಮಾದೇಗೌಡ, ರೈತ ಕೆಳಗನಹಳ್ಳಿ

ನೋಂದಣಿ ಸಂದರ್ಭದಲ್ಲಿ ಮಧ್ಯವರ್ತಿಗಳಿಗೆ ಅವಕಾಶ ನೀಡಿಲ್ಲ. ಸರದಿ ಸಾಲಿನಲ್ಲಿ ಬರುವ ರೈತರಿಗೆ ಮಾತ್ರ ಆದ್ಯತೆ ನೀಡಲಾಗಿದೆ. ಒಂದು ದಿನ ಮಾತ್ರ ಸರ್ವರ್ ಸಮಸ್ಯೆ ಕಾಣಿಸಿಕೊಂಡಿತ್ತು. ಸದ್ಯ ಈವರೆಗೆ ಯಾವುದೇ ರೈತರಿಗೆ ಸಮಸ್ಯೆ ಆಗಿಲ್ಲ. ಖರೀದಿ ಕೇಂದ್ರದಲ್ಲಿ ಅಧಿಕಾರಿಗಳ ಮಾರ್ಗದರ್ಶನದಂತೆ ಕೆಲಸ ಮಾಡಲಾಗುತ್ತಿದೆ.
ಅಕ್ಷಯ್, ಖರೀದಿ ಕೇಂದ್ರದ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net