

ಗಜೇಂದ್ರಗಡ: ಸಮೀಪದ ಸೂಡಿ ಗ್ರಾಮದ ಸಹಕಾರಿ ಸಂಘದಲ್ಲಿ ಬೆಂಬಲ ಬೆಲೆಯಡಿ ಕಡಲೆ ಖರೀದಿ ಪ್ರಾರಂಭಗೊಂಡಿದೆ. ಆದರೆ, ಉಚಿತವಾಗಿ ನೋಂದಣಿ ಮಾಡಿಕೊಳ್ಳಬೇಕಾದ ಸಿಬ್ಬಂದಿಯು ಪ್ರತಿಯೊಬ್ಬ ರೈತರಿಂದ 300 ರೂಪಾಯಿ ಪಡೆದು ವಂಚಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಲಾಕ್ ಡೌನ್ ಹಿನ್ನೆಲೆಯಲ್ಲಿ ರೈತರು ಮೊದಲೇ ಕೆಲಸವಿಲ್ಲದೇ ಮನೆಯಲ್ಲಿದ್ದಾರೆ. ಕೆಲವರು ಕೂಲಿ ಕೆಲಸವೂ ಇಲ್ಲದೇ ಪರದಾಡುತ್ತಿದ್ದಾರೆ. ಆದರೆ, ಬೆಳೆದ ಕಡಲೆ ಬೆಳೆಯನ್ನು ಬೆಂಬಲ ಬೆಲೆಯಡಿ ಮಾರಾಟ ಮಾಡಲು ಖರೀದಿ ಕೇಂದ್ರಕ್ಕೆ ಬರುವ ಪ್ರತಿಯೊಬ್ಬ ರೈತರಿಂದ 300 ರೂ. ಪಡೆಯುತ್ತಿರುವುದರಿಂದ ತೊಂದರೆ ಅನುಭವಿಸುವಂತಾಗಿದ್ದು ಜಿಲ್ಲಾಧಿಕಾರಿ ಕೂಡಲೇ ಖರೀದಿ ಕೇಂದ್ರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ರೈತರು ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ ನಿರ್ದೇಶನದಂತೆ ಗಜೇಂದ್ರಗಡ ತಾಲೂಕಿನ ಸೂಡಿ ಗ್ರಾಮದ ಸಹಕಾರಿ ಸಂಘ ಸೇರಿ ಸಮೀಪದ ಹೊಸಳ್ಳಿ, ಮಲ್ಲಾಪೂರ, ಬೆನಹಾಳ, ಸವಡಿ, ಯಾವಗಲ್, ಇಟಗಿ, ಜಕ್ಕಲಿ, ಅಬ್ಬಿಗೇರಿ, ರೋಣದಲ್ಲಿ ಬೆಂಬಲ ಬೆಲೆ ಯೋಜನೆಯಡಿ ಎಫ್ಎಕ್ಯೂ ಗುಣಮಟ್ಟದ ಕಡಲೆ ಖರೀದಿಸಲು ರೈತರಿಂದ ನೋಂದಣಿ ಹಾಗೂ ಖರೀದಿ ಪ್ರಕ್ರಿಯೆ ಪ್ರಾರಂಭವಾಗಿದೆ.
ಕ್ವಿಂಟಾಲ್ಗೆ 4875 ರೂ. ಬೆಂಬಲ ಬೆಲೆ: ಸಹಕಾರಿ ಸಂಘದಲ್ಲಿ ಮಾರ್ಚ್ 1ರಿಂದ ನೋಂದಣಿ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಮಾ. 15ರಿಂದ ಖರೀದಿ ಪ್ರಾರಂಭಗೊಂಡಿದೆ. ಕಿಸಾನ್ ಸಮೃದ್ಧಿ ಯೋಜನೆಯ ಫಲಾನುಭವಿ ರೈತರು ನೋಂದಣಿ ಮಾಡಿಸಿಕೊಳ್ಳಬಹುದು. ಕರೊನಾ ಹಿನ್ನೆಲೆಯಲ್ಲಿ ಏಪ್ರಿಲ್ 30ರ ವರೆಗೂ ರೈತರು ನೋಂದಣಿ ಮಾಡಿಸಿಕೊಳ್ಳಬಹುದು. ಮೇ 12ರವರೆಗೂ ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿಸಲಾಗುತ್ತದೆ. 1 ಕ್ವಿಂಟಾಲ್ ಕಡಲೆಗೆ 4875 ರೂ. ಬೆಂಬಲ ಬೆಲೆ ಇದೆ. ಆನ್ಲೈನ್ ರಸೀದಿ ನೀಡಲಾಗುತ್ತಿದ್ದು, ಅವರವರ ಖಾತೆಗೆ ಸರ್ಕಾರ ಹಣ ಜಮಾ ಮಾಡಲಾಗುತ್ತಿದೆ.
ಒಂದು ಎಕರೆಗೆ 3 ಕ್ವಿಂಟಾಲ್ನಂತೆ ಒಬ್ಬ ರೈತರಿಂದ ಗರಿಷ್ಠ10 ಕ್ವಿಂಟಾಲ್ ಖರೀದಿಸಲಾಗುತ್ತದೆ. ಈಗಾಗಲೇ ಸೂಡಿ ಸಹಕಾರಿ ಸಂಘದ ಖರೀದಿ ಕೇಂದ್ರದಲ್ಲಿ 587 ರೈತರು ನೋಂದಣಿ ಮಾಡಿಸಿದ್ದು, 360 ರೈತರಿಂದ ಕಡಲೆ ಖರೀದಿಸಲಾಗಿದೆ. ಸಹಕಾರಿ ಸಂಘಕ್ಕೆ ಶೇ. 1ರಷ್ಟು ಕಮಿಷನ್ ಅನ್ನು ಸರ್ಕಾರ ನೀಡುತ್ತದೆ. ನೋಂದಣಿಯಾದ 587 ರೈತರಿದ್ದು, ಒಬ್ಬ ರೈತನಿಗೆ 10 ಕ್ವಿಂಟಾಲ್ಗೆ 40870 ರೂ. ಜಮೆಯಾಗುತ್ತದೆ. ಒಬ್ಬ ರೈತನಿಂದ 408 ರೂ. ಕಮಿಷನ್ ಸಹಕಾರಿ ಸಂಘಕ್ಕೆ ಬರುತ್ತದೆ. ಒಟ್ಟು 2 ಲಕ್ಷ 39 ಸಾವಿರ ರೂ.ನಷ್ಟು ಕಮಿಷನ್ ಸಂಘಕ್ಕೆ ಬರುತ್ತಿದ್ದರೂ, ರೈತರಿಂದ ಹೆಚ್ಚುವರಿಯಾಗಿ 300 ವಸೂಲಿ ಮಾಡುವುದು ಎಷ್ಟು ಸರಿ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ವರ್ತಕರ ಪಾಲು... ಬೆಂಬಲ ಬೆಲೆ ಘೊಷಣೆಗೂ ಮುನ್ನವೇ ಶೇ. 40ರಿಂದ 50ರಷ್ಟು ಬೆಳೆಗಳನ್ನು ವರ್ತಕರು ಖರೀದಿಸಿ ದಾಸ್ತಾನು ಮಾಡಿಟ್ಟು ಕೊಂಡಿದ್ದಾರೆ. ಕೃಷಿ ವೆಚ್ಚ ಸೇರಿ ದೈನಂದಿನ ಖರ್ಚಿಗಾಗಿ ಬೆಳೆ ಬಂದ ತಕ್ಷಣವೇ ರೈತರು ಧಾನ್ಯಗಳನ್ನು ಮಾರಾಟ ಮಾಡುತ್ತಾರೆ. ದಾಸ್ತಾನು ಸಮಸ್ಯೆ, ದರ ಬಿದ್ದು ಹೋಗುವ ಭೀತಿ ಹಿನ್ನೆಲೆಯಲ್ಲಿ ರೈತರು ಆದಷ್ಟು ಬೇಗ ಕಡಿಮೆ ದರದಲ್ಲಿ ಉತ್ಪನ್ನಗಳ ಮಾರಾಟಕ್ಕೆ ಮುಂದಾಗುತ್ತಾರೆ. ಬೆಳೆಗಳು ವರ್ತಕರ ಗೋದಾಮಿನಲ್ಲಿ ಭದ್ರವಾದ ನಂತರ ಬೆಂಬಲ ಬೆಲೆ ಘೊಷಣೆಯಾಗುತ್ತದೆ. ಕಡಲೆಯನ್ನು ವರ್ತಕರು ಕ್ವಿಂಟಾಲ್ಗೆ 3,400 ರಿಂದ 3700 ರೂ. ವರೆಗೆ ಖರಿದಿಸಿದ್ದಾರೆ. ವರ್ತಕರು ಅಧಿಕಾರಿಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಕ್ವಿಂಟಾಲ್ಗೆ ಸಾವಿರದಿಂದ ಹದಿನೈದು ನೂರುವರೆಗೆ ಹೆಚ್ಚಿನ ದರದ ಬೆಂಬಲ ಬೆಲೆಯಡಿ ಮಾರುತ್ತಿದ್ದಾರೆ. ವರ್ತಕರ ಪರವಾಗಿ ತಮ್ಮ ಪಹಣಿ ಕೊಟ್ಟು ಖರೀದಿ ಕೇಂದ್ರದಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುವ ರೈತರಿಗೆ 1 ಸಾವಿರ ರೂ. ನೀಡಿ ತೃಪ್ತಿಪಡಿಸಲಾಗುತ್ತಿದೆ.
ಸಾಮಾಜಿಕ ಅಂತರ ಕಾಪಾಡದ ಸಿಬ್ಬಂದಿ, ರೈತರು... ಖರೀದಿ ಕೇಂದ್ರದಲ್ಲಿ ಸಹಕಾರಿ ಸಂಘಗಳು ನೀರು ಮತ್ತು ಸ್ಯಾನಿಟೈಸರ್ ಅನ್ನು ಕಡ್ಡಾಯವಾಗಿ ಇಡಬೇಕು. ಸಿಬ್ಬಂದಿಯು ಕೈ ಗವಸು ಮತ್ತು ಮುಖಗವಸು ಧರಿಸಬೇಕು. ದಿನಕ್ಕೆ 50 ರೈತರಿಂದ ಮಾತ್ರ ಖರೀದಿಸಬೇಕು. ಒಂದು ಮೀಟರ್ ಅಂತರದಲ್ಲಿ ಗೆರೆ ಎಳೆದು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಾಹಾ ಮಂಡಳ ನಿಯಮಿತ ಸುತ್ತೋಲೆ ಹೊರಡಿಸಿದ್ದರೂ ಖರೀದಿ ಕೇಂದ್ರದಲ್ಲಿ ಮಾತ್ರ ಯಾವುದೇ ರೀತಿಯ ಸಾಮಾಜಿಕ ಅಂತರ ಕಂಡುಬರುತ್ತಿಲ್ಲ.
10 ಕ್ವಿಂಟಾಲ್ ಕಡಲೆಯನ್ನು ಬೆಂಬಲ ಬೆಲೆಯಡಿ ಸೂಡಿ ಸೊಸೈಟಿಯಲ್ಲಿ ನೀಡಿದ್ದೇನೆ. ನನ್ನಿಂದ ಸೊಸೈಟಿ ಸಿಬ್ಬಂದಿ 300 ರೂ. ಪಡೆದಿದ್ದಾರೆ. ಎಲ್ಲ ರೈತರಿಂದಲೂ ಇದೇ ರೀತಿ ಹಣ ಪಡೆದು ಹಗಲು ದರೋಡೆ ಮಾಡಲಾಗುತ್ತಿದೆ. ಜಿಲ್ಲಾಧಿಕಾರಿಗಳು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. | ಹೆಸರು ಹಳಲಿಚ್ಛಿಸದ ಸೂಡಿ ಗ್ರಾಮದ ರೈತ
ಖಾಲಿ ಚೀಲ ತರಲು, ಸೆಣಬು ಖರೀದಿ, ಇನ್ನಿತರ ಖರ್ಚಿಗಾಗಿ 300 ರೂ. ಪಡೆಯಲು ಕಮಿಟಿ ಠರಾವು ಮಾಡಿತ್ತು. ಆದರೆ, ಎಲ್ಲ ಖರ್ಚು ಕಮಿಟಿ ಭರಿಸುತ್ತದೆ ಎಂದು ಕಮಿಟಿಯವರು ಹೇಳಿದ್ದರಿಂದ ಯಾರೊಬ್ಬರಿಂದ ಹಣ ಪಡೆಯುತ್ತಿಲ್ಲ. | ಬಿ.ಎ. ಸೊಬಗಿನ, ಕಾರ್ಯದರ್ಶಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಸೂಡಿ