ನೋಂದಣಿ ಆದಾಯಕ್ಕೆ ಸರ್ವರ್ ಕೊಕ್ಕೆ

h18-sub registrer 1
Published on

ಹುಬ್ಬಳ್ಳಿ: ಒಳ್ಳೆಯ ಮುಹೂರ್ತ ಇದೆ ಎಂದುಕೊಂಡಿದ್ದ ಆಸ್ತಿ ಮಾರಾಟ ಮತ್ತು ಖರೀದಿದಾರರಿಗೆ ‘ಸರ್ವರ್ ಪ್ರಾಬ್ಲಂ’ ದಿಕ್ಕು ತಪ್ಪಿಸಿದೆ. ಸೇಲ್ ಡೀಡ್, ಮಾರ್ಟ್​ಗೇಜ್(ಒತ್ತಿ ಪತ್ರ), ವಿಮೋಚನಾ ಪತ್ರ ಸೇರಿ ಇತರೆ ಯಾವುದೇ ನೋಂದಣಿ ಪ್ರಕ್ರಿಯೆ 20 ದಿನಗಳಿಂದ ಸ್ಥಗಿತಗೊಂಡಿದೆ. ಇದರಿಂದ ಧಾರವಾಡ ಜಿಲ್ಲೆಯಿಂದ ಸರ್ಕಾರದ ಖಜಾನೆ ಸೇರುವ 15 ಕೋಟಿ ರೂ.ಗೂ ಹೆಚ್ಚು ಆದಾಯಕ್ಕೆ ಹೊಡೆತ ಬಿದ್ದಿದೆ.

ಆಸ್ತಿ ಮಾರಾಟಗಾರರು, ಖರೀದಿದಾರರು ಮತ್ತು ಸಾಕ್ಷಿದಾರರು ನೋಂದಣಾಧಿಕಾರಿ ಕಚೇರಿಗೆ ತಿಂಗಳಿಂದ ನಿತ್ಯ ಅಲೆಯುತ್ತಿದ್ದಾರೆ. ಸರ್ವರ್ ಪದೇ ಪದೆ ಕೈಕೊಡುತ್ತಿರುವುದರಿಂದ ಯಾವುದೇ ಕೆಲಸವಾಗದೇ ಜನರು ಹಿಡಿಶಾಪ ಹಾಕಿ ಮನೆಗೆ ತೆರಳುತ್ತಿದ್ದಾರೆ.

ಧಾರವಾಡ ನಗರ, ಹುಬ್ಬಳ್ಳಿ ಉತ್ತರ ಮತ್ತು ದಕ್ಷಿಣ, ಕುಂದಗೋಳ, ಕಲಘಟಗಿ, ಅಣ್ಣಿಗೇರಿ, ನವಲಗುಂದಲ್ಲಿ ಉಪ ನೋಂದಣಾಧಿಕಾರಿಗಳ ಕಚೇರಿಗಳಿವೆ. ಜಿಲ್ಲಾದ್ಯಂತ ನಿತ್ಯ 300ಕ್ಕೂ ಹೆಚ್ಚು ಜನರು ಆಸ್ತಿ ನೋಂದಣಿ, ಮಾರಾಟ ಮಾಡಲು ಅರ್ಜಿ ಗುಜರಾಯಿಸುತ್ತಾರೆ. ಆದರೆ, ಬರೋಬ್ಬರಿ ಒಂದು ತಿಂಗಳಿಂದ ನೋಂದಣಿ ಪ್ರಕ್ರಿಯೆಗೆ ತಡೆಯಾಗಿದ್ದು, ನೋಂದಣಿ ಸಂಖ್ಯೆಯಲ್ಲಿ ಭಾರಿ ಕುಸಿತ ಕಂಡಿದೆ.

ಪ್ಯಾಚ್ ನಂ. 6.8 ಜೋಡಣೆಯಾಗಿದ್ದು, ಇದಕ್ಕೆ ಆಧಾರ್ ಮತ್ತು ಮೊಬೈಲ್ ಸಂಖ್ಯೆ ನಮೂದಿಸಲಾಗುತ್ತದೆ. ಇದರಿಂದ ಬರುವ ಒಟಿಪಿ(ಒನ್ ಟೈಮ್ ಪಾಸ್​ವರ್ಡ್) ಆಧಾರದಲ್ಲಿ ನೋಂದಣಿ ಪ್ರಕ್ರಿಯೆಗೆ ಚಾಲನೆ ಸಿಗುತ್ತದೆ. ಆದರೆ ಇದು ಬೇಗ ಬೇಗ ಮಾಹಿತಿಯನ್ನು ತೆಗೆದುಕೊಳ್ಳುತ್ತಿಲ್ಲ. ಇನ್ನೊಂದೆಡೆ ಸಿಡಿ ಬ್ಯಾಕ್​ಅಪ್ ಸಮಸ್ಯೆಯೂ ಉದ್ಭವವಾಗಿದ್ದು, ನೋಂದಣಾಧಿಕಾರಿ ಕಚೇರಿ ಬೊಕ್ಕಸಕ್ಕೆ ನಷ್ಟ ತರಿಸಿದೆ.

ಫಟಾಫಟ್ ಸಮಸ್ಯೆ ಪರಿಹಾರಕ್ಕೂ ಸಿಬ್ಬಂದಿ ಕೊರತೆ ಮುಖ್ಯ ಕಾರಣವಾಗಿದೆ. ಒಂದು ಕಚೇರಿಯಲ್ಲಿ ಏನಿಲ್ಲವೆಂದರೂ ಪ್ರಥಮ ಹಾಗೂ ದ್ವಿತೀಯ ದರ್ಜೆ ಸಹಾಯಕರ ಹುದ್ದೆ ತಲಾ ಎರಡಾದರೂ ಇರಬೇಕು. ಕೆಲವಡೆ ಬರೀ ದ್ವಿತೀಯ ದರ್ಜೆ ಸಹಾಯಕರು ಮಾತ್ರ ಕೆಲಸ ಮಾಡುತ್ತಿದ್ದು, ಕಂಪ್ಯೂಟರ್​ನಲ್ಲಿ ಅರ್ಜಿ ಭರ್ತಿ ವಿಳಂಬವಾಗುತ್ತಿದೆ. ಕಂಪ್ಯೂಟರ್ ಸಂಖ್ಯೆ ಹೆಚ್ಚು ಮಾಡಿದರೆ ಸಿಬ್ಬಂದಿ ಬೇಕು. ಇಲಾಖೆ ಕೂಡ ಇದನ್ನು ಮೈ ಮರೆತು ಕುಳಿತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಮನವಿ ಸಲ್ಲಿಸಿದರೂ ಪರಿಹಾರವಿಲ್ಲ: ಸಮಸ್ಯೆ ಪರಿಹಾರಕ್ಕೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಬಹಳಷ್ಟು ಸಲ ಮನವಿ ಮಾಡಲಾಗಿದೆ. ಆದರೆ, ಇದಕ್ಕೆ ಇದುವರೆಗೆ ತಕ್ಕುದಾದ ಉತ್ತರ ಬಂದಿಲ್ಲ. ಪರಿಣಾಮ ಇಲಾಖೆಯ ಆದಾಯದಲ್ಲಿ ಕುಸಿತ ಕಂಡಿರುವುದಲ್ಲದೇ ಜನರ ಸಂಕಟವನ್ನೂ ಹೆಚ್ಚಿಸಿದೆ.

ಹಣ ಮಾಡುವ ಅಡ್ಡೆ: ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ, ದಾಖಲೆಗಳು ಕೈಯಲ್ಲಿರುತ್ತವೆ. ಆದರೂ ಸಾಕ್ಷಿ ಕೇಳುತ್ತಾರೆ. ಸರ್ವರ್ ಇಲ್ಲ, ಸರ್ವರ್ ಬಂದಾಗ ಕರೆಯುತ್ತೇನೆ ಎನ್ನುತ್ತಾರೆ. ಇದರ ಹಿಂದೆ ಹಣ ಪಡೆಯುವ ಉದ್ದೇಶವಲ್ಲದೇ ಬೇರೇನೂ ಇಲ್ಲ. ನೋಂದಣಾಧಿಕಾರಿ ಕಚೇರಿ ಅಂದರೆ ಹಣ ಮಾಡುವ ಅಡ್ಡೆಯಲ್ಲದೇ ಬೇರೇನೂ ಅಲ್ಲ ಎಂದು ಆಸ್ತಿ ನೋಂದಣಿ ಮಾಡಿಸಲು ಆಗಮಿಸಿದ್ದವರೊಬ್ಬರು ಆರೋಪಿಸಿದರು.

ಸರ್ವರ್ ಸಮಸ್ಯೆ ಇರುವುದು ನಿಜ. ಆದರೆ, ಈಗಾಗಲೇ ಈ ಸಮಸ್ಯೆ ಬಗೆಹರಿದಿದೆ. ಸರ್ಕಾರದ ಆದಾಯದಲ್ಲೇನೂ ನಷ್ಟವಾಗಿಲ್ಲ. ಇವತ್ತು ಇಲ್ಲವೆಂದರೆ ನಾಳೆ ಬಂದಾದರೂ ಆಸ್ತಿ ನೋಂದಣಿಯನ್ನು ಜನರು ಮಾಡುತ್ತಾರೆ. ಸರ್ಕಾರ ಹೇಳಿದಂತೆ ತಂತ್ರಜ್ಞಾನ ಅಳವಡಿಕೆ ಪ್ರಕ್ರಿಯೆ ಮಾಡಲಾಗುತ್ತದೆ. | ದೀಪಾ ಚೋಳನ್, ಧಾರವಾಡ ಜಿಲ್ಲಾಧಿಕಾರಿ ರಾಜ್ಯದ ಸುಮಾರು 200 ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಸರ್ವರ್ ಸಮಸ್ಯೆ ಎದುರಾಗಿದೆ. ಆಸ್ತಿ ಖರೀದಿ ಮತ್ತು ಮಾರಾಟ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹಾಗೂ ಭದ್ರತೆಗೆ ಖರೀದಿದಾರರು ಮತ್ತು ಮಾರಾಟಗಾರರ ಮೊಬೈಲ್​ಗೆ ಒಟಿಪಿ ಪಡೆಯುವ ವ್ಯವಸ್ಥೆ ಮಾಡಲಾಗುತ್ತಿದೆ. ಹಾಗಾಗಿ ಸರ್ವರ್ ಸಮಸ್ಯೆ ಕಾಣಿಸಿಕೊಂಡಿದೆ. ತಾಂತ್ರಿಕ ಸಮಸ್ಯೆ ಬರುವ ಸೋಮವಾರದೊಳಗೆ ಸರಿಯಾಗುವ ನಿರೀಕ್ಷೆ ಇದೆ. | ಮಹೇಶ ಪಂಡಿತ, ಜಿಲ್ಲಾ ನೋಂದಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net