ನೊಣವಿನಕೆರೆ ತ್ಯಾಜ್ಯಮಯ

07
Published on

ನೀರು ಕಲುಷಿತ, ಚಿಕ್ಕ ಸೋಪಾನದ ಅಚ್ಚುಕಟ್ಟು ಪ್ರದೇಶದಲ್ಲಿ ಸೊಳ್ಳೆ, ಕೀಟ ಕಾಟ

ಪ್ರಕಾಶ್​, ನೊಣವಿನಕೆರೆ

ಜಿಲ್ಲೆಯ ಪ್ರಮುಖ ಕೆರೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ತಿಪಟೂರು ತಾಲೂಕು ನೊಣವಿನಕೆರೆ ಕೆರೆ ತ್ಯಾಜ್ಯಗಳಿಂದ ತುಂಬಿ ಹೋಗುತ್ತಿದೆ. ಕೆರೆ ಅಂಗಳದ ಶ್ರೀಉಡಿಸಲ ಕೆಂಪಮ್ಮದೇವಸ್ಥಾನದ ಪಕ್ಕದ ಚಿಕ್ಕ ಸೋಪಾನಕ್ಕೆ ಪ್ರತಿ ಬುಧವಾರ ನಡೆಯುವ ಸಂತೆಯ ತಾಜ್ಯ, ಕಸಕಡ್ಡಿ ಮತ್ತು ಬೇಡವಾದ ತ್ಯಾಜ್ಯ ಹಾಕುವ ತೊಟ್ಟಿಯಾಗಿದೆ.

ತ್ಯಾಜ್ಯ ನೀರಿಗೆ ಸೇರಿ ಕೆರೆ ನೀರು ಕಲುಶಿತವಾಗಿ ಸೊಳ್ಳೆ, ಕೀಟಗಳ ವಾಸಸ್ಥಾನವಾಗಿದೆ. ಕೆರೆ ತುಂಬಿದಾಗ ಕೋಡಿ ನೀರು ಮತ್ತು ಕೃಷಿ ಚಟುವಟಿಕೆಗೆ ಅಚುಕಟ್ಟು ಪ್ರದೇಶದ ಕಾಲುವೆಗೆ ಸೋಪಾನದ ಮೂಲಕ ನೀರು ಹರಿಯುವುದರಿಂದ ಅಚ್ಚುಕಟ್ಟು ಪ್ರದೇಶದ ರೈತರು ನೀರಿನಲ್ಲಿ ಗದ್ದೆ ಕೆಲಸ ಮಾಡುವುದು, ಕೃಷಿ ಉಪಕರಣ ತೊಳೆಯುವುದು ಮತ್ತು ಜಾನುವಾರುಗಳು ಈ ಕಲುಶಿತವಾಗಿರುವ ನೀರನ್ನೇ ಕುಡಿಯುವುದರಿಂದ ರೋಗ ಹರಡುವ ಭೀತಿ ಕಾಡುತ್ತಿದೆ. ಹಿಂದೆ ಚಿಕ್ಕ ಸೋಪಾನದಲ್ಲಿ ಕಲ್ಲಿನ ಮೆಟ್ಟಿಲುಗಳ ವ್ಯವಸ್ಥೆ ಇದ್ದು, ಗ್ರಾಮದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮ, ಶುಭ ಸಮಾರಂಭಗಳಿಗೆ ಪೂಜಾ ಕಾರ್ಯಗಳ ಸ್ಥಳವಾಗಿ, ಹಬ್ಬಗಳಲ್ಲಿ ರೈತರು ಕೃಷಿ ಉಪಕರಣ, ಜಾನುವಾರುಗಳನ್ನು ತೊಳೆಯುವುದರ ಜತೆಗೆ ಪಕ್ಕದಲ್ಲಿರುವ ಗ್ರಾಮ ದೇವತೆ ದೇವಸ್ಥಾನದ ಪೂಜಾ ಕಾರ್ಯಗಳಿಗೆ ನೀರು ಉಪಯೋಗಿಸುತ್ತಿದ್ದರು. ಆದರೆ ಈಗ ಈ ನೀರು ಸಂಪೂರ್ಣ ಕಲುಶಿತಗೊಂಡು ಬಳಕೆಗೆ ಯೋಗ್ಯವಾಗಿಲ್ಲ. ಪಕ್ಕದಲ್ಲಿಯೇ ಇರುವ ಮಂಟಪದಲ್ಲಿ ಭಕ್ತರು ಅಡುಗೆ ಮಾಡಿ ಹರಕೆ ತೀರಿಸುತ್ತಿದ್ದು, ನಂತರ ದಿನಗಳಲ್ಲಿ ಮರುನಿಮಾರ್ಣ ಮಾಡಲು ಮಂಟಪ, ಮೆಟ್ಟಿಲು ತೆರವುಗೊಳಿಸಿ ವರ್ಷಗಳೆ ಕಳೆದರು ಕೆಲಸ ಪ್ರಾರಂಭವಾಗದ ಕಾರಣ ಗಿಡ, ಗೆಂಟೆಗಳು ಬೆಳೆದು, ಕಸಕಡ್ಡಿ ಮತ್ತು ತ್ಯಾಜ್ಯ ಹಾಕುವ ಜಾಗವಾಗಿದೆ. ಸಾಕಷ್ಟು ಸಲ ಸಂಭಂದಪಟ್ಟ ಇಲಾಖೆ ಹಾಗೂ ಅಧಿಕಾರಿಗಳಿಗೆ ಅಭಿವೃದ್ಧಿ ಪಡಿಸುವಂತೆ ಸರ್ಕಾರದವರೆಗೆ ಪ್ರಸ್ತಾವನೆ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ, ಧಾರ್ಮಿಕ ಆಚರಣೆ ಸ್ಥಳ ಕಣ್ಮರೆಯಾಗುವ ಮೊದಲು ಸಂಭಂದಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳಿಯ ಜನಪ್ರತಿನಿಧಿಗಳು ಸೂಕ್ತ ಕ್ರಮವಹಿಸಿ ಸಾರ್ವಜನಿಕರ ಉಪಯೋಗಕ್ಕೆ ಬರುವಂತೆ ಸೂಕ್ತ ಕ್ರಮಕೈಗೊಳ್ಳಬೇಕಿದೆ.

ರೈತರಿಗೆ ಜೀವಜಲ: ತಿಪಟೂರು ತಾಲೂಕಿನಲ್ಲಿ ಅತಿ ದೊಡ್ಡ ಕೃಷಿ ಆಧಾರಿತ ಕೆರೆಯಾಗಿದ್ದು, ಸುಮಾರು 2500 ಎಕರೆಯಷ್ಟು ಜಮೀನಿನ ರೈತರು ಈ ಕೆರೆಯ ನೀರನ್ನೇ ಅವಲಬಿಸಿದ್ದಾರೆ. ಸುಮಾರು 56,000 ಮೆಟ್ರಿಕ್​ ಟನ್​ ಭತ್ತವನ್ನು ಬೆಳೆಯುವುದರ ಜತೆಗೆ ಜಾನುವಾರುಗಳಿಗೂ ಮೇವು ಸೃಷಿಯಾಗುತ್ತಿದೆ. ಕೂಲಿ ಕಾರ್ಮಿಕರಿಗೆ ಉದ್ಯೋಗ ಸೃಷ್ಟಿ, ಸುತ್ತಮುತ್ತಲಿನ 35 ಹಳ್ಳಿಗಳ ಅಂರ್ತಜಲ ವೃದ್ಧಿಯಾಗಿ, ನೊಣವಿನಕೆರೆ, ಅಮಾನಿಕೆರೆ ಅಚ್ಚುಕಟ್ಟುದಾರರು ಸೇರಿ ಸುಮಾರು 18000 ಸಾವಿರ ರೈತ ಕುಟುಂಬಗಳಿಗೆ ಜೀವ ಜಲವಾಗಿದೆ.

ಕೆರೆ ಅಂಗಳದ ಸೋಪಾನದಲ್ಲಿ ಕಸ ಹಾಗೂ ತಾಜ್ಯವಸ್ತುಗಳನ್ನು ಹಾಕುತ್ತಿರುವ ಬಗ್ಗೆ ಸ್ಥಳಿಯರಿಂದ ದೂರುಗಳು ಬಂದಿದೆ. ಶ್ರೀವೇ ಸ್ಥಳ ಪರಿಶೀಲಿಸಿ ಸೋಪಾನ ರಸುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ನಿರ್ಧರಿಸುತ್ತೇವೆ. ಅಗತ್ಯಬಿದ್ದರೆ ಸ್ಥಳಿಯ ಗ್ರಾಪಂ ಹಾಗೂ ಪೊಲೀಸರ ಸಹಕಾರ ಪಡೆದು ಕಸ ಹಾಕುವುದನ್ನು ನಿಯಂತ್ರಿಸುತ್ತೇವೆ.| ಲಕ್ಷ$್ಮಯ್ಯ ಎಇಇ, ಹೇಮಾವತಿ ಇಲಾಖೆಶ್ರೀ ಉಡಿಸಲ ಕೆಂಪಮ್ಮದೇವಸ್ಥಾನಕ್ಕೆ ಸಾವಿರಾರು ಭಕ್ತರು ವಿವಿಧ ಊರುಗಳಿಂದ ಬರುತ್ತಾರೆ. ದೇವಸ್ಥಾನದ ಪಕ್ಕದಲ್ಲೇ ಕಸ ಹಾಕುವುದರಿಂದ ಸಾಕಷ್ಟು ತೊಂದರೆಯಾಗಿದೆ. ಕೆಟ್ಟವಾಸನೆಯ ಜತೆಗೆ ಸೊಳ್ಳೆ, ಕೀಟಗಳ ವಾಸಸ್ಥಾನವಾಗಿ ತೊಂದರೆ ಅನುಭವಿಸುವಂತಾಗಿದೆ.| ಬಸವರಾಜು ನೊಣವಿನಕೆರೆ ಸ್ಥಳಿಯ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net