

ಚಿತ್ರದುರ್ಗ: ನೊಂದವರಿಗೆ ನ್ಯಾಯ ಕೊಡಿಸುವುದೇ ವಕೀಲ ಧರ್ಮವಾಗಿದ್ದು, ಆ ನಿಟ್ಟಿನಲ್ಲಿ ವಕೀಲರಾಗಲು ಶ್ರಮಿಸಬೇಕು ಎಂದು ಹೈಕೋರ್ಟ್ ಧಾರವಾಡ ಬೆಂಚ್‌ನ ನ್ಯಾಯಮೂರ್ತಿ ಜಿ.ಬಸವರಾಜು ಸಲಹೆ ನೀಡಿದರು.
ಸರಸ್ವತಿ ಕಾನೂನು ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪದವಿ ಪ್ರಧಾನ ದಿನ (ಗ್ರಾಜ್ಯುಯೇಷನ್ ಡೇ) ಉದ್ಘಾಟಿಸಿ ಮಾತನಾಡಿ, ಉತ್ತಮ ಸಮಾಜ ನಿರ್ಮಿಸುವಲ್ಲಿ ವಕೀಲರು, ಕಾನೂನು ವಿದ್ಯಾರ್ಥಿಗಳ ಪಾತ್ರ ದೊಡ್ಡದು ಎಂದರು.
ದೇಶದ ಸ್ವಾತಂತ್ರ್ಯಕ್ಕಾಗಿ ಸಾಕಷ್ಟು ವಕೀಲರು ಹೋರಾಡಿದ್ದಾರೆ. ರಾಷ್ಟ್ರಪಿತ ಮಹಾತ್ಮ ಗಾಂಧಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕೂಡ ವಕೀಲರಾಗಿದ್ದವರು. ಇದು ಅತ್ಯಂತ ಪವಿತ್ರ ವೃತ್ತಿಯಾಗಿದ್ದು, ಉನ್ನತ ಸ್ಥಾನಕ್ಕೇರಲು ಶ್ರದ್ಧೆ, ಪ್ರಾಮಾಣಿಕತೆ, ಮಾನವೀಯತೆ, ಸಮಯ ಪ್ರಜ್ಞೆ ಬಹಳ ಮುಖ್ಯ ಎಂದು ಕಿವಿಮಾತು ಹೇಳಿದರು.
ವೃತ್ತಿಯಲ್ಲಿ ಪ್ರಾವಿಣ್ಯ ಪಡೆದಂತೆಲ್ಲ ಪ್ರಕರಣಗಳನ್ನು ಲೀಲಾಜಾಲವಾಗಿ ಜಯಿಸಬಹುದು. ನ್ಯಾಯಾಲಯ, ನ್ಯಾಯಾಧೀಶರಿಗೆ ಅಗೌರವ ತೋರದೆ, ವಿನಯತೆ, ವಿನಮ್ರತೆಯಿಂದ ವಾದ ಮಾಡಬೇಕು ಎಂದು ಪದವಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ವಕೀಲರಾದೊಡನೆ ಹಣದ ಹಿಂದೆ ಓಡಬೇಡಿ. ವೃತ್ತಿಪರರ ಸಂಖ್ಯೆ ಜಾಸ್ತಿಯಾಗುತ್ತಿದೆ ಎಂದು ಆತಂಕಪಡುವ ಅಗತ್ಯವಿಲ್ಲ. ಎಲ್ಲ ಕ್ಷೇತ್ರಕ್ಕೂ ವಕೀಲರ ಅಗತ್ಯವಿದ್ದು, ಕೊನೆ ಉಸಿರಿರುವವರೆಗೂ ನಿರಂತರ ಅಧ್ಯಯನದಲ್ಲಿ ತೊಡಗಿ. ಇಂಗ್ಲಿಷ್‌ನಲ್ಲಿ ವಾದ ಮಂಡಿಸಿದರೆ ಗೆಲ್ಲುತ್ತೇನೆಂಬ ಭ್ರಮೆ ಬೇಡ. ಕನ್ನಡವೂ ಅತ್ಯಂತ ಸೂಕ್ತವಾಗಿದ್ದು, ಹಿಂಜರಿಕೆ ಬೇಡ ಎಂದು ಹೇಳಿದರು.
ಎಲ್ಲಿಯಾದರೂ ಅಕ್ರಮ, ಅನ್ಯಾಯ, ಭ್ರಷ್ಠಾಚಾರ ನಡೆದರೆ ನೋಡಿಕೊಂಡು ಸುಮ್ಮನೆ ಇರಬೇಡಿ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ನೀವೇ ಸಲ್ಲಿಸಬಹುದು. ವೃತ್ತಿಯ ಜತೆ ಮಾನವೀಯತೆ ಮುಖ್ಯವಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ಇಲ್ಲದೆ ಏನನ್ನು ಪಡೆಯಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಕಾರ್ಯಾಂಗ, ಶಾಸಕಾಂಗ ಅನುಷ್ಠಾನಗೊಳಿಸುವಲ್ಲಿ ವಿಫಲವಾದಾಗ ನ್ಯಾಯಾಂಗ ಮಧ್ಯ ಪ್ರವೇಶಿಸಬೇಕಾಗುತ್ತದೆ. ಆದ್ದರಿಂದ ವಕೀಲರು ಕಾನೂನು ಅಂಶಗಳನ್ನು ಪರಿಪೂರ್ಣವಾಗಿ ತಿಳಿದುಕೊಂಡಿರಬೇಕು ಎಂದು ಕರೆ ನೀಡಿದರು.
ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶೆ ಬಿ.ಎಸ್.ರೇಖಾ ಮಾತನಾಡಿ, ಕಾನೂನು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಾಗಿ ಕಲಿಯುವುದಕ್ಕೂ, ವಕೀಲರಾಗಿ ಕಾರ್ಯ ನಿರ್ವಹಿಸುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ನ್ಯಾಯಾಲಯಕ್ಕೆ ದೇವರ ಸ್ಥಾನವಿದ್ದು, ಶಿಸ್ತು ಮತ್ತು ಘನತೆ ಕಾಪಾಡಬೇಕು ಎಂದು ಸಲಹೆ ನೀಡಿದರು.
ಸರಸ್ವತಿ ಕಾನೂನು ಕಾಲೇಜಿನ ಅಧ್ಯಕ್ಷ, ರಾಜ್ಯಸಭೆ ಮಾಜಿ ಸದಸ್ಯ ಎಚ್.ಹನುಮಂತಪ್ಪ, ಬೆಳಗಾವಿ 11ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಇ.ಎಸ್.ಈರಣ್ಣ, ಕಾಲೇಜಿನ ಕಾರ್ಯದರ್ಶಿ ಡಿ.ಕೆ.ಶೀಲಾ, ಪ್ರಾಚಾರ್ಯೆ ಡಾ.ಎಂ.ಎಸ್.ಸುಧಾದೇವಿ, ಆಡಳಿತಾಧಿಕಾರಿ ಪ್ರೊ.ಡಿ.ಎಚ್.ನಟರಾಜ, ಹಿರಿಯ ನೋಟರಿ ಚಲ್ಮೇಶ್, ರೂಪಾ ಜಿ.ಬಸವರಾಜು ಇತರರಿದ್ದರು.