ನೊಂದವರಿಗೆ ನ್ಯಾಯ ಪ್ರಾಧಿಕಾರ ಗುರಿ

2808Klb21
Published on

ಕಲಬುರಗಿ: ಕೋವಿಡ್-19 ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಜನಸಂದಣಿ ಇಲ್ಲದೆ ರಾಜಿ ಸಂಧಾನದ ಮೂಲಕ ನ್ಯಾಯ ಒದಗಿಸಿಕೊಡಲು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಸೆಪ್ಟೆಂಬರ್ 19ರಂದು ರಾಜ್ಯಾದ್ಯಂತ ಮೆಗಾ ಇ-ಲೋಕ್ ಅದಾಲತ್ ನಡೆಸಲಾಗುತ್ತಿದೆ ಎಂದು ಹೈಕೋರ್ಟ್​ ನ್ಯಾಯಾಧೀಶರಾದ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ಅರವಿಂದ ಕುಮಾರ ಹೇಳಿದರು.
ಬೆಂಗಳೂರು ಹೈಕೋರ್ಟನಿಂದ ವಿಡಿಯೋ ಸಂವಾದ ಮೂಲಕ 30 ಜಿಲ್ಲೆಗಳ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು, ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಮತ್ತು ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಜಾತಿ, ಧರ್ಮವೆಂಬ ತಾರತಮ್ಯವಿಲ್ಲದೆ ಸಮಾಜದ ಕಟ್ಟಕಡೆ ವ್ಯಕ್ತಿಗೂ ನ್ಯಾಯ ಸಿಗಲಿ ಎಂಬುದೇ ಪ್ರಾಧಿಕಾರದ ಮುಖ್ಯ ಧ್ಯೇಯ ಮತ್ತು ಲೋಕ್ ಅದಾಲತ್ ಅಶಯವಾಗಿದೆ ಎಂದರು.
ಕರೊನಾ ಹಿನ್ನೆಲೆಯಲ್ಲಿ ಕಕ್ಷಿದಾರರು ನ್ಯಾಯಾಲಯಕ್ಕೆ ಬಂದು ಜನಸಂದಣಿ ನಡುವೆ ಕಲಾಪ ನಡೆಸುವುದು ಕಷ್ಟಸಾಧ್ಯ. ಹೀಗಾಗಿ ರಾಷ್ಟ್ರದಲ್ಲೇ ಮೊದಲ ಸಲ ರಾಜ್ಯದಲ್ಲಿ ಮೆಗಾ ಇ-ಲೋಕ್ ಅದಾಲತ್ ನಡೆಸಲಾಗುತ್ತಿದೆ. ಈ ಅದಾಲತ್ನಲ್ಲಿ ಕಕ್ಷಿದಾರರು, ವಿಮಾ ಕಂಪನಿಗಳು ಸೇರಿ ಇತರ ಪ್ರತಿವಾದಿ ಪ್ರತಿನಿಧಿಗಳು ಹಾಗೂ ವಕೀಲರು ನ್ಯಾಯಾಲಯಕ್ಕೆ ಬರುವ ಅಗತ್ಯವಿಲ್ಲ. ತಾವು ಇದ್ದ ಕಡೆಯಿಂದಲೇ ಲ್ಯಾಪ್ಟಾಪ್ ಅಥವಾ ಸ್ಮಾರ್ಟ ಫೋನ್ ಮೂಲಕ ದಾಖಲಾತಿಗಳೊಂದಿಗೆ ಭಾಗವಹಿಸಬಹುದಾಗಿದೆ ಎಂದು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಗೋಮತಿ ರಾಘವೇಂದ್ರ ಇದ್ದರು.

18ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ
ಕಲಬುರಗಿಯಿಂದ ವಿಡಿಯೋ ಸಂವಾದದಲ್ಲಿ ಭಾಗವಹಿಸಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಆರ್.ಜೆ. ಸತೀಶಸಿಂಗ್ ಮಾತನಾಡಿ, ಜಿಲ್ಲಾ ನ್ಯಾಯಾಲಯದಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥಕ್ಕೆ 14746 ಪ್ರಕರಣಗಳ ಪೈಕಿ 2458 ಗುರುತಿಸಲಾಗಿದೆ. ಲೋಕ್ ಅದಾಲತ್ನಲ್ಲಿ ಪ್ರಕರಣ ಇತ್ಯರ್ಥಕ್ಕಾಗಿ ಸೆ.18ರವರೆಗೆ ಕಕ್ಷಿದಾರರು ಜಿಲ್ಲಾ ಅಥವಾ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬಹುದು. 7000ಕ್ಕೂ ಹೆಚ್ಚಿನ ಅರ್ಜಿ ಲೋಕ್ ಅದಾಲತ್ನಲ್ಲಿ ಬರುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net