ನೊಂದವರಿಗಾಗಿ ಹೋರಾಡಿದ ನಾರಾಯಣಗುರು

10_09_Mdy_04(Narayanaguru Jayanthi)
Published on

ಮಂಡ್ಯ: ಬಡತನ ಮತ್ತು ನೊಂದ ಸಮುದಾಯವನ್ನು ಮೇಲೆತ್ತಲು ಹೋರಾಡಿದ ಮಹಾನ್ ನಾಯಕ ಬ್ರಹ್ಮಶ್ರೀ ನಾರಾಯಣ ಗುರು ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಬಣ್ಣಿಸಿದರು.


ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾಡಳಿತದಿಂದ ಶನಿವಾರ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.
ನಾರಾಯಣ ಗುರು ಸಾಮಾಜಿಕ ನ್ಯಾಯದ ಬಗ್ಗೆ ಜನಸಮುದಾಯಕ್ಕೆ ತಿಳಿಸುವ ಮೂಲಕ ತಳಮಟ್ಟದಲ್ಲಿ ಮನುಷ್ಯರ ನಡುವೆ ಇರುವ ಭೇದಗಳನ್ನು ಹೋಗಲಾಡಿಸಲು ಶ್ರಮಿಸಿದ್ದರು. ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ನಾರಾಯಣ ಗುರು ಪಾತ್ರ ಅಪಾರ ಎಂದರು.


ಸಹಾಯಕ ಪ್ರಾಧ್ಯಾಪಕ ಲೋಕೇಶ್ ಮಾತನಾಡಿ, ನಾರಾಯಣಗುರು ಆಟ, ಪಾಠದ ಜತೆಗೆ ಇತರ ಚಟುವಟಿಕೆಗಳಲ್ಲೂ ಚುರುಕಾಗಿದ್ದರು. ಶ್ಲೋಕಗಳನ್ನು ರಚಿಸುವುದು, ಹಾಡುವುದು ಪರಿಪಾಠವಾಗಿತ್ತು. ಕಂದಾಚಾರ ತೊಲಗಿಸಿ ಪ್ರತಿಯೊಬ್ಬರೂ ಬ್ರಹ್ಮತ್ವ, ಮೋಕ್ಷವನ್ನು ಪಡೆಯಲು, ಭಗವಂತನನ್ನು ಆರಾಧಿಸಲು, ಪೂಜಿಸಲು ಮುಕ್ತವಾದ ಅವಕಾಶ ಕಲ್ಪಿಸಲು ಕೇರಳದ ಭಾಗದಲ್ಲಿ ದೊಡ್ಡ ಚಳವಳಿ ಹುಟ್ಟುಹಾಕಿ ದೇಶಕ್ಕೆ ಉತ್ತಮ ಮಾರ್ಗ ನೀಡಿದವರು ಎಂದು ತಿಳಿಸಿದರು.


ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಅಪ್ಪಾಜಿಗೌಡ, ನಗರಸಭೆ ಸದಸ್ಯ ಅರುಣ್‌ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್.ಉದಯ್‌ಕುಮಾರ್, ಮುಖಂಡರಾದ ರಾಮಲಿಂಗಯ್ಯ, ಪುಟ್ಟಸ್ವಾಮಿ, ಬಿ.ಪಿ.ರಾಜಕುಮಾರ್, ದಾಸೇಗೌಡ, ಅರವಿಂದ್‌ಕುಮಾರ್ ಇತರರು ಇದ್ದರು. ಇದೇ ಸಂದರ್ಭದಲ್ಲಿ ಜಿಲ್ಲೆಯ 122 ಮಕ್ಕಳಿಗೆ ಪ್ರೋತ್ಸಾಹಧನ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net