ನೈಸರ್ಗಿಕ ಸಂಪತ್ತು ಕಾಪಾಡಲು ಕೈಜೋಡಿಸಿ

24-gdg-2
Published on

ಗದಗ: ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದು ಖ್ಯಾತಿ ಪಡೆದಿರುವ ಕಪ್ಪತಗುಡ್ಡ ರಕ್ಷಣೆಗೆ ಸರ್ಕಾರ ಬದ್ಧ. ಅಪಾರ ಔಷಧೀಯ ಸಸ್ಯರಾಶಿಯನ್ನು ಒಡಲಲ್ಲಿ ಇಟ್ಟುಕೊಂಡಿರುವ ನೈಸರ್ಗಿಕ ಸಂಪತ್ತು ಕಾಪಾಡಲು ಸಾರ್ವಜನಿಕರು ಕೈಜೋಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಅರಣ್ಯ ಇಲಾಖೆ ವತಿಯಿಂದ ಭಾನುವಾರ ಆಯೋಜಿಸಿದ್ದ ಕಪ್ಪತ ಉತ್ಸವ-2021 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರು ಸಸಿಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು.

ಅರಣ್ಯ ಸಂಪತ್ತು ಅಭಿವೃದ್ಧಿಯಲ್ಲಿ ಸಾರ್ವಜನಿಕರ ಸಹಭಾಗಿತ್ವ ಅಗತ್ಯವಾಗಿದೆ. ಅದರೊಂದಿಗೆ ಮಕ್ಕಳಿಗೆ ಶಾಲೆ ಹಾಗೂ ಮನೆಯ ಆವರಣದಲ್ಲಿ ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಹವ್ಯಾಸವನ್ನು ಈಗಿನಿಂದಲೇ ರೂಢಿಸಿಕೊಳ್ಳಲು ಜಾಗೃತಿ ಮೂಡಿಸುವ ಕಾರ್ಯವಾಗಬೇಕಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, 371ಕ್ಕೂ ಅಧಿಕ ವಿವಿಧ ಜಾತಿಯ ಔಷಧೀಯ ಸಸ್ಯಗಳು ಇರುವ ಕಪ್ಪತಗುಡ್ಡದ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಧಾರವಾಡ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ ಮಾತನಾಡಿ, ಪರಿಸರ ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಿಕೊಳ್ಳುವುದರೊಂದಿಗೆ ಬೆಳೆಸುವ ಕಾರ್ಯದಲ್ಲಿ ತೊಡಗಬೇಕಿದೆ. ಸಸ್ಯ ಸಂಕುಲ ಉಳಿಸಿದರೆ ಮುಂದಿನ ಜೀವ ಸಂಕುಲ ನೆಮ್ಮದಿ ಜೀವನ ಸಾಗಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ವಿ. ಸೂರ್ಯಸೇನ ಪ್ರಾಸ್ತಾವಿಕವಾಗಿ ಮಾತನಾಡಿ, ಕಪ್ಪತ ಉತ್ಸವದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಪರಿಸರ ಸಂರಕ್ಷಣೆ ಕುರಿತು ಉತ್ತಮ ಚರ್ಚೆಗಳಾಗಿ ಮುಂದಿನ ಪೀಳಿಗೆಗೆ ವನ್ಯಜೀವಿ ಹಾಗೂ ಅರಣ್ಯ ಸಂರಕ್ಷಣೆ ಕುರಿತು ಅರಿವು ಮೂಡುವಂತಾಗಬೇಕು ಎಂದರು.

ಧಾರವಾಡ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ ಹಾಗೂ ಅರಣ್ಯ ತರಬೇತಿ ಕೇಂದ್ರದ ಜಂಟಿ ನಿರ್ದೇಶಕಿ ಸೋನಲ್ ವೃಷ್ಣಿ ಅವರು ಬರೆದಿರುವ ‘ಕಪ್ಪತಗುಡ್ಡದ ಔಷಧೀಯ ಸಸ್ಯಗಳು’ ಪುಸ್ತಕವನ್ನು ಸಚಿವ ಸಿ.ಸಿ. ಪಾಟೀಲ ಬಿಡುಗಡೆ ಗೊಳಿಸಿದರು. ಬೆಟಗೇರಿಯಿಂದ ಬಿಂಕದಕಟ್ಟಿ ಮೃಗಾಲಯಕ್ಕೆ ಹೊಸದಾಗಿ ಆರಂಭಿಸಲಾದ ಬಸ್ ಸಂಚಾರ ಸೇವೆಗೂ ಸಚಿವರು ಚಾಲನೆ ನೀಡಿದರು.

ಕಪ್ಪತ ಉತ್ಸವದ ಅಂಗವಾಗಿ ಕಪ್ಪತಗುಡ್ಡದ ಮಹತ್ವ ಸಾರುವ ಅಂಚೆ ಚೀಟಿಗಳ ಪ್ರದರ್ಶನ ಹಾಗೂ ಛಾಯಾಚಿತ್ರ ಪ್ರದರ್ಶನವನ್ನು ಸಚಿವ ಸಿ.ಸಿ. ಪಾಟೀಲ ವೀಕ್ಷಿಸಿದರು. ಧಾರವಾಡ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ ಕ್ಷೀರಸಾಗರ, ಅರಣ್ಯ ತರಬೇತಿ ಕೇಂದ್ರದ ಜಂಟಿ ನಿರ್ದೇಶಕಿ ಸೋನಲ್ ವೃಷ್ಣಿ, ಪರಿಸರ ಸಂರಕ್ಷಣಾಧಿಕಾರಿ ಡಾ. ಸಮದ್ ಕೊಟ್ಟೂರ, ಶಿವಾನಂದ ಕಳವೆ, ಅಜಿತಕುಮಾರ ಸಿರಸಾಟೆ, ವನ್ಯಜೀವಿ ಪರಿಪಾಲಕರಾದ ಡಾ. ಅರುಣ ಎಸ್.ಕೆ., ಸಿ.ಎಸ್. ಅರಸಿನಾಳ, ಸುಗಂದಿ ಮತ್ತು ರಾಣಾ ಉಪನ್ಯಾಸ ಮಂಡಿಸಿದರು.

ಜಿಪಂ ಅಧ್ಯಕ್ಷ ಈರಪ್ಪ ನಾಡಗೌಡರ, ತಾಪಂ ಅಧ್ಯಕ್ಷ ವಿದ್ಯಾಧರ ದೊಡ್ಡಮನಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ ಎನ್., ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರಿಮಳಾ ವಿ.ಎಚ್, ಸೇರಿದಂತೆ ಪರಿಸರ ಪ್ರೇಮಿಗಳು, ಅರಣ್ಯ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಪ್ಪತಗುಡ್ಡದ ಔಷಧೀಯ ಸಸ್ಯಗಳ ಪ್ರಬೇಧ ಹಾಗೂ ಅವುಗಳ ಉಪಯೋಗದ ಕುರಿತು ಅರಣ್ಯ ಅಧಿಕಾರಿಗಳಾದ ಸೋನಲ್ ವೃಷ್ಣಿ ಮತ್ತು ಯಶಪಾಲ್ ಕ್ಷೀರಸಾಗರ ಅವರು ಬರೆದಿರುವ ಕಪ್ಪತಗುಡ್ಡ ಪುಸ್ತಕ ಆಂಗ್ಲ ಭಾಷೆಯಲ್ಲಿದ್ದು, ಅದನ್ನು ಕನ್ನಡ ಭಾಷೆಗೆ ತರ್ಜುಮೆಗೊಳಿಸಿ ಸಾರ್ವಜನಿಕರಿಗೆ ಗುಡ್ಡದ ಮಹತ್ವ ತಿಳಿಸಿಕೊಡಬೇಕು. ಈ ಕಾರ್ಯಕ್ಕೆ ಅಗತ್ಯವಿರುವ ಅನುದಾನ ಒದಗಿಸಲಾಗುವುದು. | ಸಿ.ಸಿ. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಗದಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net