

ಬೆಳಗಾವಿ: ವೈಜ್ಞಾನಿಕ ರೀತಿಯಲ್ಲಿ ಕಟಾವು ಮಾಡಿ, ನೈಸರ್ಗಿಕವಾಗಿ ಮಾಗಿಸಿದ ಹಾಗೂ ಕ್ಯಾಲ್ಸಿಯಂ, ಕಾರ್ಬೈಡ್ ಮುಕ್ತ ಹಣ್ಣುಗಳನ್ನು ಯೋಗ್ಯ ದರದಲ್ಲಿ ನೇರವಾಗಿ ರೈತರಿಂದಲೇ ಗ್ರಾಹಕರಿಗೆ ದೊರಕಿಸಲು ಮಾವು ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.
ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ನಗರದ ಕ್ಲಬ್ ರಸ್ತೆಯ ಹ್ಯೂಮ್ಪಾರ್ಕ್‌ನಲ್ಲಿ ಮೇ 26ರಿಂದ ಮೇ 29ರವರೆಗೆ ಆಯೋಜಿಸಿರುವ ಮಾವು ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟಿಸಿ ಅವರು ಮಾತನಾಡಿದರು. ಮೇಳದಲ್ಲಿ ಹಲವು ಬಗೆಯ ಮಾವಿನ ಹಣ್ಣುಗಳು ಮಾರಾಟಕ್ಕಿವೆ. ಜಿಲ್ಲೆಯ ಗ್ರಾಹಕರು ಯೋಗ್ಯ ದರದಲ್ಲಿ ಖರೀದಿಸಿ ರುಚಿಕರ ಮಾವು ಸವಿಯಬಹುದು ಎಂದರು. ಅರ್ಕಾ ಮೈಕ್ರೋಬಿಯಲ್ ಕನ್ಸಾರ್ಷಿಯಂ ದ್ರವ ರೂಪದ ಗೊಬ್ಬರವನ್ನೂ ಡಿಸಿ ಲೋಕಾರ್ಪಣೆಗೊಳಿಸಿದರು.
ಮಾವು ಪ್ರದರ್ಶನ ಕೋಣೆ ಉದ್ಘಾಟಿಸಿ ಮಾತನಾಡಿದ ಜಿಪಂ ಸಿಇಒ ಎಚ್.ವಿ. ದರ್ಶನ್, ಇಂತಹ ಮೇಳಗಳು ರೈತರಲ್ಲಿ ಆತ್ಮ ವಿಶ್ವಾಸ ತುಂಬುತ್ತವೆ. ಬರೀ ಮಾವು ಪ್ರದರ್ಶನ ಅಷ್ಟೇ ಅಲ್ಲದೆ ಪ್ರತಿ ಎರಡು ತಿಂಗಳಿಗೊಮ್ಮೆ ರೈತರು ಬೆಳೆದ ವಿವಿಧ ತೋಟಗಾರಿಕೆ ಬೆಳೆಗಳ ಮೇಳವನ್ನೂ ಆಯೋಜಿಸಿ ರೈತರನ್ನು ಪ್ರೋತ್ಸಾಹಿಸಲಾಗುತ್ತದೆ ಎಂದು ತಿಳಿಸಿದರು.
ಗಮನ ಸೆಳೆದ ತರಹೇವಾರಿ ಮಾವು: ತೋತಾಪುರಿ, ಕೇಸರ, ಮಲಗೋವಾ, ದೂಧಪೇಡಾ, ಕೊಂಕಣ ರುಚಿ, ಆಪೂಸ್, ರಸಪೂರಿ, ದಸೇರಿ, ಬೆನೆಶಾನ, ಸಿಂಧೂರಿ, ಮಲ್ಲಿಕಾ, ಕೊಬ್ರಿಕಾಯಿ, ಕರಿ ಇಶಾಡಿ, ಯಾಕೃತಿ ಸೇರಿ ನೂರಕ್ಕೂ ಹೆಚ್ಚು ತರಹೇವಾರಿ ತಳಿಯ ರುಚಿಕರ ಮಾವಿನ ಹಣ್ಣುಗಳು ಗ್ರಾಹಕರ ಬಾಯಲ್ಲಿ ನೀರೂರಿಸಿದವು. ಉಪ್ಪಿನಕಾಯಿ ಮಾವಿನ ಕಾಯಿಗಳೂ ಪ್ರದರ್ಶನದಲ್ಲಿ ಗ್ರಾಹಕರ ಗಮನ ಸೆಳೆದವು. ಮೇಳ ಉದ್ಘಾಟನೆ ಆಗುವ ಮೊದಲೇ ಆಗಮಿಸುವುದಕ್ಕೆ ಶುರುವಿಟ್ಟುಕೊಂಡ ಗ್ರಾಹಕರು ಮಾವು ಖರೀದಿಯಲ್ಲಿ ನಿರತರಾಗಿದ್ದರು. ಮೇ 29ರವರೆಗೆ ಮೇಳ ಇರಲಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಹಾಂತೇಶ ಮುರಗೋಡ, ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಸೋಮಶೇಖರ ಹುಲ್ಲೊಳ್ಳಿ ಹಾಗೂ ಇಲಾಖೆಯ ಸಿಬ್ಬಂದಿ ಇದ್ದರು.
ಮೇಳದಲ್ಲಿ ಪ್ರತಿಯೊಂದು ಮಾವಿನ ಮಳಿಗೆಯನ್ನೂ ಜಿಲ್ಲಾಧಿಕಾರಿಗಳು ವೀಕ್ಷಿಸಿ, ರೈತರೊಂದಿಗೆ ಮಾತನಾಡಿದರು. ಬೆಳಗಾವಿ, ಖಾನಾಪುರ, ಧಾರವಾಡ, ಕಿತ್ತೂರ ಸೇರಿ ವಿವಿಧ ತಾಲೂಕುಗಳಿಂದ ಮಾವು ಮಾರಾಟಕ್ಕೆ ಬಂದಿದ್ದ ರೈತರು ತಾವು ಬೆಳೆದ ಮಾವಿನ ಬಗ್ಗೆ ಜಿಲ್ಲಾಧಿಕಾರಿಗೆ ವಿವರಿಸಿದರು. ಮಹಾರಾಷ್ಟ್ರದಿಂದಲೂ ರೈತರು ಮೇಳಕ್ಕೆ ಆಗಮಿಸಿದ್ದರು.