

ಶಿರಸಿ: ತಾಲೂಕಿನ ನೇರ್ಲವಳ್ಳಿ ಮತ್ತಿಗಾರ ಗ್ರಾಮದ ನೈಸರ್ಗಿಕ ಅರಣ್ಯ ಪ್ರದೇಶದಲ್ಲಿ ಅಕೇಶಿಯಾ ನೆಡುತೋಪು ಮಾಡ ಹೊರಟಿರುವ ಅರಣ್ಯ ಇಲಾಖೆ ಕ್ರಮವನ್ನು ಖಂಡಿಸಿ ಸ್ಥಳೀಯರು ಡಿಎಫ್ಒ ಎಸ್.ಜಿ.ಹೆಗಡೆ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಇಲ್ಲಿಯ ಸರ್ವೆ ನಂಬರ್ 312, 15 ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಅರಣ್ಯ ಇಲಾಖೆ ಅಕೇಶಿಯಾ ಗಿಡ ನೆಡಲಾರಂಭಿಸಿದೆ. ಈ ಪ್ರದೇಶದಲ್ಲಿ ಈಗಾಗಲೇ ಕಾಡುಕೋಣ, ಕಾಟಿ, ಜಿಂಕೆ ಇನ್ನಿತರ ಪ್ರಾಣಿಗಳು ವಾಸವಾಗಿವೆ. ಇಲ್ಲಿ ಅಕೇಶಿಯಾ ನೆಡುವುದರಿಂದ ಪಾರಿಸರಿಕ ವ್ಯವಸ್ಥೆ ಹಾಳಾಗುತ್ತದೆ ಎಂದು ದೂರಿದರು.
ಸ್ಥಳೀಯ ನಿವಾಸಿ ರಾಜೀವ ಹೆಗಡೆ ಮರ್ಲಮನೆ ಮಾತನಾಡಿ, ಸ್ಥಳೀಯ ಜಾತಿ ಸಸ್ಯಗಳಾದ ಮತ್ತಿ, ಹೊನಗಲು ಹಾಗೂ ಹಣ್ಣಿನ ಗಿಡಗಳನ್ನು ನೆಡುವಂತೆ ಈ ಹಿಂದೆ ಆಗ್ರಹಿಸಿದ್ದೆವು. ಇಲಾಖೆಯ ಸಿಬ್ಬಂದಿ ಈಗ ಅಕೇಶಿಯಾ ಗಿಡಗಳನ್ನಷ್ಟೇ ನಾಟಿ ಮಾಡುತ್ತಿದ್ದಾರೆ. ನೈಸರ್ಗಿಕ ಅರಣ್ಯದ ಈ ಪ್ರದೇಶದಲ್ಲಿ ಅಕೇಶಿಯಾ ನೆಡುತೋಪಿನಿಂದ ನೇರ್ಲವಳ್ಳಿ, ಸಪ್ಪುರ್ತಿ, ಮರ್ಲಮನೆ, ಸಾಯಿಮನೆ, ದೇವಿಕೈ, ಗೌಡನಮನೆ ಇನ್ನಿತರ ಹಳ್ಳಿಗಳ ಕೃಷಿಗೆ ತೊಂದರೆ ಆಗಲಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಎಸ್. ಜಿ.ಹೆಗಡೆ, ನೈಸರ್ಗಿಕ ಅರಣ್ಯದ ನಡುವೆ ಅಕೇಶಿಯಾ ನೆಡುವುದಿಲ್ಲ. ಅಲ್ಲಿಯ ಮಣ್ಣಿನ ಗುಣ ಆಧರಿಸಿ ನೆಡುತ್ತೇವೆ. ಈ ಘಟನೆ ಕುರಿತು ಸ್ಥಳೀಯ ಅಧಿಕಾರಿಗಳೊಂದಿಗೆ ರ್ಚಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ಸ್ಥಳೀಯರಾದ ಜಿ.ಜಿ. ಹೆಗಡೆ, ರಾಘವೇಂದ್ರ ಹೆಗಡೆ, ಎಂ. ಎನ್.ಹೆಗಡೆ, ಉಮೇಶ ಹೆಗಡೆ, ಮಂಜುನಾಥ ಹೆಗಡೆ, ಭಾರ್ಗವ ಹೆಗಡೆ, ರಾಮನಾಥ ಹೆಗಡೆ, ಮಂಜುಳಾ ಭಟ್ಟ ಇತರರಿದ್ದರು.