ನೈಪುಣ್ಯತೆ, ಸಹನಾ ಗುಣಗಳನ್ನು ಅಳವಡಿಸಿಕೊಳ್ಳಿ

5blrp9
Published on

ಬೇಲೂರು: ರೋಟರಿ ಸಂಸ್ಥೆ ಸದಸ್ಯರು ಸಮಯ, ಹಣ ಉಳಿತಾಯ, ನೈಪುಣ್ಯತೆ ಹಾಗೂ ಸಹನಾ ಗುಣಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಂಸ್ಥೆಯ ಧ್ಯೇಯೋದ್ದೇಶಗಳು ಈಡೇರುತ್ತವೆ ಎಂದು ಪಿಎಚ್‌ಎಫ್(ಪಾಲ್ ಹ್ಯಾರೀಸ್ ಫೆಲೋ)ಬಿ.ಎಂ.ಭಟ್ ಅಭಿಪ್ರಾಯಪಟ್ಟರು.

ತಾಲೂಕಿನ ಅರೇಹಳ್ಳಿಯ ರೋಟರಿ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪ್ರದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1914ರಲ್ಲಿ ರಚನೆಯಾದ ರೋಟರಿ ಫೌಂಡೇಷನ್‌ಗೆ 1989ರಲ್ಲಿ ನಾನು ಸದಸ್ಯನಾಗಿ ಸೇರ್ಪಡೆಗೊಂಡೆ. ಅಂದು 18,496 ರೋಟರಿ ಕ್ಲಬ್‌ಗಳಿದ್ದವು. ಆದರೆ ಇಂದು ರಾಷ್ಟ್ರಾದ್ಯಂತ 37,673 ಕ್ಲಬ್‌ಗಳಿದ್ದು 11 ಲಕ್ಷಕ್ಕೂ ಹೆಚ್ಚು ಸದಸ್ಯರು ಪ್ರಪಂಚಾದ್ಯಂತ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಿರುವ ಅರೇಹಳ್ಳಿ ರೋಟರಿ ಕ್ಲಬ್‌ನ ಕಾರ್ಯವೈಖರಿ ಎಲ್ಲರೂ ಮೆಚ್ಚುವಂತದ್ದಾಗಿದೆ. ನೂತನ ಪದಾಧಿಕಾರಿಗಳೂ ಹೆಚ್ಚಿನ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಅರೇಹಳ್ಳಿ ರೋಟರಿ ಸಂಸ್ಥೆ ನೂತನ ಅಧ್ಯಕ್ಷ ಪ್ರಸನ್ನ.ಎಂ.ಎಸ್ ಮಾತನಾಡಿ, ಆರೋಗ್ಯ, ಶಿಕ್ಷಣ, ಸಾಮಾಜಿಕ, ಸ್ವಚ್ಛತಾ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ರೋಟರಿ ಸದಸ್ಯರ ಸಹಕಾರದಿಂದ ಯೋಜನೆ ರೂಪಿಸಿ ಅದರಂತೆ ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನ ಗೊಳಿಸಲಾಗುವುದು ಎಂದರು.

ಅರೇಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಇತ್ತೀಚೆಗೆ ವರ್ಗಾವಣೆಗೊಂಡ ಪ್ರಸೂತಿ ತಜ್ಞೆ ಡಾ.ಮಮತಾ ಅವರನ್ನು ಸನ್ಮಾನಿಸಲಾಯಿತು.

ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ಕೆ.ಆರ್.ಕಾರ್ತಿಕ್, ಎಂ.ವೈ.ಪ್ರವೀಣ್, ಚೇತನ್‌ಪ್ರಕಾಶ್, ವಿಜಯ್‌ಕುಮಾರ್, ಸಿ.ಎಸ್.ಮಹೇಶ್ ಹಾಗೂ ಇತರ ಪದಾಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net