

ವಿಜಯವಾಣಿ ಸುದ್ದಿಜಾಲ ಧಾರವಾಡ
ಶಾಲಾ ಹಂತದಲ್ಲೇ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧಗೊಳಿಸಲು ನಗರದ ಶ್ರೀಮತಿ ವಿದ್ಯಾ ಪಿ. ಹಂಚಿನಮನಿ ಅಂತಾರಾಷ್ಟ್ರೀಯ ಶಾಲೆಯಲ್ಲಿ ಆರಂಭಿಸಿರುವ ನೈಪುಣ್ಯ ತರಬೇತಿ ಕೇಂದ್ರಕ್ಕೆ ಭಾನುವಾರ ಚಾಲನೆ ನೀಡಲಾಯಿತು.
ಶಾಂತೇಶ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರೊ. ಪ್ರಹ್ಲಾದ ಹಂಚಿನಮನಿ ಕೇಂದ್ರ ಉದ್ಘಾಟಿಸಿ ಮಾತನಾಡಿ, ಶಾಲಾ ಹಂತದಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭದ್ರ ಬುನಾದಿ ಹಾಕುವುದು ಇಂದಿನ ಅಗತ್ಯ. ಹೀಗಾಗಿ ನೈಪುಣ್ಯ ಕೇಂದ್ರ ಆರಂಭಿಸಲಾಗಿದೆ ಎಂದರು.
ಕಾರ್ಯದರ್ಶಿ ಮನೋಜ ಹಂಚಿನಮನಿ ಮಾತನಾಡಿ, ತರಬೇತಿ ಕೇಂದ್ರದಲ್ಲಿ ಪ್ರತ್ಯೇಕ ಪಠ್ಯಕ್ರಮವಿದ್ದು, ಒಲಿಂಪಿಯಾಡ್, ಎನ್‌ಟಿಎಸ್‌ಇ, ಐಐಟಿ, ಮೆಡಿಕಲ್ ಪರೀಕ್ಷೆಗಳಿಗೆ ಫೌಂಡೇಷನ್ ಕೋಚಿಂಗ್ ನೀಡಲು ನುರಿತ ಶಿಕ್ಷಕರ ವೃಂದ ಇದೆ. ಮಕ್ಕಳು ಕೇಂದ್ರ ಪ್ರಯೋಜನ ಪಡೆಯಬೇಕು ಎಂದರು.
ವರ್ಷಾ ಹಂಚಿನಮನಿ ಮಾತನಾಡಿ, ತರಬೇತಿಗೆ ಅಗತ್ಯವಿರುವ ಎಲ್ಲ ಬಗೆಯ ಭೌತಿಕ ಮತ್ತು ಬೌದ್ಧಿಕ ಸೌಲಭ್ಯ ನೀಡಲು ವಿ.ಪಿ. ಹಂಚಿನಮನಿ ಶಿಕ್ಷಣ ಸಂಸ್ಥೆ ಸದಾ ಅಗ್ರಸ್ಥಾನದಲ್ಲಿದೆ ಎಂದರು.
ಶಾಲೆ ಪ್ರಾಚಾರ್ಯ ವಿದ್ವಾನ್ ನವೀನಕುಮಾರ ಭಟ್ ಮಾತನಾಡಿ, 1ನೇ ತರಗತಿಯಿಂದ ಆರಂಭವಾಗುವ ಇಂಗ್ಲಿಷ್, ಗಣಿತ, ವಿಜ್ಞಾನ ಒಲಿಂಪಿಯಾಡ್ ಪರೀಕ್ಷೆಗಳಿಂದ ಕಲಿಕಾ-ಬೋಧನಾ ಪ್ರಕ್ರಿಯೆಗೊಂದು ಹೊಸ ಆಯಾಮ ನೀಡಿದಂತಾಗಲಿದೆ. ವಿದ್ಯಾರ್ಥಿಗಳಲ್ಲಿ ನಿಖರತೆ ಮತ್ತು ಕಲಿಕೆ ವೇಗ ಹೆಚ್ಚಲಿದೆ. ಹೊಸ ಬಗೆಯ ಮತ್ತು ಸತತ ಪರಿಶ್ರಮಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಮತ್ತು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಹೆಚ್ಚಿಸಲು ನೈಪುಣ್ಯವು ಒಂದು ಉತ್ತಮ ವೇದಿಕೆಯಾಗಲಿದೆ ಎಂದರು.
ನಂತರ ಪಾಲಕರಿಗಾಗಿ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಎಜು-ಲೀಪ್ ಲರ್ನಿಂಗ್ ಸಲ್ಯೂಷನ್ಸ್ ಅಕಾಡೆಮಿ ನಿರ್ದೇಶಕ ವಿನಾಯಕ ಕುಲಕರ್ಣಿ ಅವರು ಶಾಲಾ ಹಂತದಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಅಗತ್ಯತೆ ಕುರಿತು ಮಾತನಾಡಿದರು.
ಶಿಕ್ಷಕಾ ಶ್ರೀಪಾದ ಕುಲಕರ್ಣಿ, ವಿ.ಪಿ.ಹಂಚಿನಮನಿ ಅಂತಾರಾಷ್ಟ್ರೀಯ ಶಾಲೆ ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು, ಕಾಲೇಜಿನ ಉಪನ್ಯಾಸಕರು, ಇತರರು ಇದ್ದರು.