

ಬಳ್ಳಾರಿ : ಸಿಎಂ ಸಿದ್ದರಾಮಯ್ಯ ವಿರುದ್ಧ ನ್ಯಾಯಾಲಯ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದರಿಂದ, ತನಿಖೆ ಎದುರಿಸಲು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ಶ್ರೀರಾಮುಲು ಆಗ್ರಹಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಬಿಜೆಪಿ ಘಟಕದಿಂದ ಶುಕ್ರವಾರ ನಡೆದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದರು. ಸಿಎಂ ಹುದ್ದೆಯಲ್ಲಿ ಇದ್ದ ವೇಳೆ ಲೋಕಯುಕ್ತ ಅಧಿಕಾರಿಗಳು ನಿಷಕ್ಷಪಾತ ತನಿಖೆ ನಡೆಸಲು ಕಷ್ಟವಾಗಲಿದೆ. ಈ ಹಿಂದೆ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರ ವಿರುದ್ಧ ಆರೋಪ ಕೇಳಿ ಬಂದಾಗ ರಾಜೀನಾಮೆ ನೀಡಿದ್ದರು. ಉತ್ತರ ಕರ್ನಾಟಕ ಭಾಗದಲ್ಲಿ ಸರ್ಕಾರದಿಂದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ, ಕೇವಲ ತಪ್ಪುಗಳನ್ನು ಸಮರ್ಥನೆ ಮಾಡಿಕೊಳ್ಳುವಲ್ಲಿ ಕಾಲಹರಣ ಮಾಡಲಾಗುತ್ತಿದೆ ಎಂದರು. ರಾಜ್ಯಪಾಲರಿಗೆ ಮುಡಾ ಹಗರಣದ ಬಗ್ಗೆ ಯಾವುದೇ ದಾಖಲಾತಿ ನೀಡಬಾರದೆಂದು ಕ್ಯಾಬಿನೆಟ್‌ನಲ್ಲಿ ನಿರ್ಣಯ ಮಾಡಲಾಗಿದ್ದು, ಇದಕ್ಕೆ ಸಾಕಷ್ಟು ಅನುಮಾನ ಮೂಡಿದೆ ಎಂದು ಆರೋಪಿಸಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಬಳಸಿಕೊಂಡು ಸಂಸದರಾಗಿರುವ ಈ. ತುಕರಾಮ್ ಬಹಿರಂಗ ಚರ್ಚೆಗೆ ಆಹ್ವಾನ ಮಾಡಿದ್ದಾರೆ. ಆದರೆ, ಅವರ ಬಹಿರಂಗ ಆಹ್ವಾನಕ್ಕೆ ಕೆಲವೇ ದಿನಗಳಲ್ಲಿ ಇಡಿ ಅಧಿಕಾರಿಗಳು ಉತ್ತರಿಸಲಿದ್ದಾರೆ. ಇಡಿ ಜತೆ ಬಹಿರಂಗವಾಗಿ ಚರ್ಚಿಸಲಿ ಎಂದು ತಿರುಗೇಟು ನೀಡಿದರು. ನಾಲ್ಕು ಬಾರಿ ಶಾಸಕರಾಗಿ ಗೆದ್ದಿರುವ ಈ. ತುಕರಾಮ್ ಸಚಿವ ಸಂತೋಷ ಲಾಡ್ ಕೃಪೆ ಹಾಗೂ ಸರ್ಕಾರದ ಹಣ ದುರುಪಯೋಗ ಪಡಿಸಿಕೊಂಡು ಗೆಲುವು ಸಾಧಿಸಿದ್ದಾರೆ ಎಂದರು. ಮುಂಬರುವ ಸಂಡೂರಿನ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿಯಿಂದ ನಾನು ಸ್ಪರ್ಧೆ ಮಾಡುವುದಿಲ್ಲ, ಪಕ್ಷದ ನಿರ್ಧಾರದ ಅಭ್ಯರ್ಥಿ ಗೆಲುವಿಗೆ ಶ್ರಮಿಸುವೆ ಎಂದರು.
ಎಂಎಲ್‌ಸಿ ವೈ. ಎಂ. ಸತೀಶ್ ಮಾತನಾಡಿ, ಜಿಲ್ಲೆಯಲ್ಲಿ ಶಿಷ್ಟಚಾರ ಅನುಸರಿಸಿ ಕಾಮಗಾರಿಗಳು ನಡೆಯುತ್ತಿಲ್ಲ. ಕಾಮಗಾರಿಗಳ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿದರೆ ಮಾಹಿತಿ ಇಲ್ಲ ಎಂದು ತಿಳಿಸುತ್ತಿದ್ದಾರೆ. ಸಂಸದ ಈ. ತುಕರಾಮ್ ಅವಳಿ ಜಿಲ್ಲೆಯ ಸಂಸದರು ಅಥವಾ ಸಂಡೂರು ತಾಲೂಕಿಗೆ ಮಾತ್ರ ಸಂಸದರು ಎಂಬುದು ತಿಳಿಯುತ್ತಿಲ್ಲ. ಪ್ರಮುಖರಾದ ಬಿಜೆಪಿ ಜಿಲ್ಲಾದ್ಯಕ್ಷ ಅನಿಲ ಕುಮಾರ ಮೋಕಾ, ಮುಖಂಡರಾ ಒಬಳೇಶ್, ಮಲ್ಲೇಶ ಇದ್ದರು.