ಬಳ್ಳಾರಿ : ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಹೇಳಿದರು.
ಜಿಲ್ಲೆಯ ಸಂಡೂರು ರೆಸಾರ್ಟ್ ನಲ್ಲಿ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಸುದ್ದಿಗೋಷ್ಠಿ ಮಾಡುವಾಗಲೂ ಅವರ ಪಕ್ಕದಲ್ಲಿ ಕೂಡಲು ನಾಯಕರು, ಮುಖಂಡರು ಹಿಂಜರಿಯುತ್ತಿದ್ದಾರೆ. ಈ ಹಗರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ ಎಂಬ ಭಯದಿಂದ ಅವರನ್ನು ಸದನದಲ್ಲೂ ಕೂಡ ಶಾಸಕರು, ಸಚಿವರು ಅವರೊಂದಿಗೆ ಸಮರ್ಥಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯನವರು, ಬಿಜೆಪಿಯ ಕಾಲದ 21 ಹಗರಣಗಳು ಇವೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಒಂದು ವರ್ಷ ಮೂರು ತಿಂಗಳಾದರೂ ತನಿಖೆ ಮಾಡದೆ ಕಡುಬು ತಿನ್ನುತ್ತಿದ್ದರಾ ಎಂದು ? ಪ್ರಶ್ನಿಸಿದ ಕಾರಜೋಳ, ಸಿಎಂ ಸಿದ್ದರಾಮಯ್ಯನವರು ಹತಾಶೆ ಮನೋಭಾವದಿಂದ ಬಿಜೆಪಿ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಅಧಿಕಾರಕ್ಕೆ ಬಂದಾಗಲೇ ತನಿಖೆ ಮಾಡಿದ್ದರೆ ಬೇಡ ಎನ್ನುತ್ತಿದ್ದಿಲ್ಲ. ಇದೀಗ ಕಾಂಗ್ರೆಸ್ ನವರ ಹಗರಣ ಬಂದಿದ್ದಕ್ಕೆ ಆರೋಪಗಳನ್ನು ಮಾಡುತ್ತಿದ್ದು, ಅವೆಲ್ಲ ಸುಳ್ಳು ಆರೋಪಗಳು ಎಂದು ತಿಳಿಸಿದರು.
ವಾಲ್ಮೀಕಿ ಹಗರಣವನ್ನು ನಾನು ಮಾಡಿಲ್ಲ ಅಧಿಕಾರಿಗಳು ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯನವರು ಹೇಳುತ್ತಿದ್ದಾರೆ. ಹಾಗಾದರೆ ರಾಜ್ಯದ ಮುಖ್ಯಮಂತ್ರಿಗಳಾಗಿ ನಿಮ್ಮ ಪಾತ್ರವೇನು ?ನೀವು ಅಸಹಾಯಕರಾ ? ಏಕೆ ಅಧಿಕಾರಿಗಳಿಗೆ ಹಗರಣ ಮಾಡಲು ಬಿಟ್ಟಿದ್ದೀರಿ ? ಅಧಿಕಾರಿಗಳು ನಿಮ್ಮ ಗಮನಕ್ಕೆ ತಂದು ಮಾಡಿದ್ದಾರೋ, ಹೇಳದೇನೆ ಮಾಡಿದ್ದಾರೊ ಒಟ್ಟಿನಲ್ಲಿ ನಿಮ್ಮ ಸರ್ಕಾರದಲ್ಲಿ ಹಗರಣ ಆಗಿದೆ. ನೀವು ಜವಾಬ್ದಾರಿ ಹೋರಬೇಕು. ನಿಮ್ಮ ದಕ್ಷತೆ, ಪ್ರಾಮಾಣಿಕೆಗೆ ಮೆರಗು ಬರಬೇಕಾದರೆ, ನಿಮ್ಮ ವ್ಯಕ್ತಿತ್ವಕ್ಕೆ ಹೊಳಪು ಬರಬೇಕಾದರೆ ರಾಜೀನಾಮೆ ನೀಡಿ, ನೈತಿಕ ಹೊಣೆಹೊತ್ತು, ನಿಷ್ಪಕ್ಷಪಾತವಾದ ತನಿಖೆಗೆ ವಹಿಸಬೇಕು ಎಂದು ತಿಳಿಸಿದರು.
ಸಿಎಂ ಸಿದ್ದರಾಮಯ್ಯರಂತಹ ಹಿರಿಯ ರಾಜಕಾರಣಿ, ಸಮಾಜವಾದದ ಹಿನ್ನೆಲೆಯಿಂದ ಬಂದವರು, ನೀವೇ ಅಧಿಕಾರಕ್ಕೆ ಅಂಟಿಕೊಂಡು ಕೂತರೆ ಹೇಗೆ ಎಂದು ಮರು ಪ್ರಶ್ನಿಸಿದ ಕಾರಜೋಳ, ಹಿಂದೆ ದೇಶದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ, ಟೆಲಿಫೋನ್ ಹಗರಣ ಆರೋಪ ಬಂದಾಗ ರಾಜ್ಯದ ಮಾಜಿ ಸಿಎಂ ರಾಮಕೃಷ್ಣ ಹೆಗಡೆ ರಾಜೀನಾಮೆ ನೀಡಿದ್ದರು. ದೇಶದ ಸ್ವಾತಂತ್ರ್ಯದ 70 ವರ್ಷಗಳ ಕಾಂಗ್ರೆಸ್ ಆಡಳಿತ ಅವಧಿಯಲ್ಲಿ 60 ವರ್ಷ ಕಾಂಗ್ರೆಸ್ ಅವಧಿಯಲ್ಲಿ ಅನೇಕ ಇಡಿ, ಸಿಬಿಐ, ಆದಾಯ ಪ್ರಕರಣಗಳು ಆಗಿವೆ. ಅವೆಲ್ಲ ನೀವೆ ಮಾಡಿಸಿದ್ದೀರ ಎಂದರೆ ಒಪ್ಪಿಕೊಳ್ಲುತ್ತೀರಾ? ತನಿಖಾ ಸಂಸ್ಥೆಗಳು ಸ್ವತಂತ್ರ ಸಂಸ್ಥೆಗಳು. ನಿಷ್ಪಕ್ಷಪಾತವಾದ ತನಿಖೆಗಳನ್ನು ಮಾಡುತ್ತಾರೆ. ಸ್ವಾಭಾವಿಕವಾಗಿ ಸ್ವತಂತ್ರವಾಗಿ ಮಾಡುತ್ತಾರೆ. ಅದು ಸಂವಿಧಾನತ್ವ. ಜನಸಾಮಾನ್ಯರು ಎಲ್ಲರೂ ವಿದ್ಯಾವಂತರು, ಬುದ್ದಿವಂತರಾಗಿದ್ದಾರೆ.
ಒಂದು ಚುನಾಯಿತ ಸರ್ಕಾರದ ಜವಾಬ್ದಾರಿ. ಅತಿವೃಷ್ಟಿ, ಅನಾವೃಷ್ಟಿ ಅದಾಗ ಸರ್ಕಾರ ಸ್ವಯಂ ಪ್ರೇರಿತಯಿಂದ ಅವರವರ ಜವಾಬ್ದಾರಿಯನ್ನು ನಿಭಾಯಿಸಬೇಕು. ಬರ ಬದಾಗಲೂ ಮಂತ್ರಿಗಳು ರಾಜ್ಯ ಪ್ರವಾಸ ಮಾಡಲಿಲ್ಲ ಎಂದರೆ, ಸರ್ಕಾರ ನಿಷ್ಕ್ರಿಯ ಆಗಿದೆ. ಆಡಳಿತ ಪಕ್ಷದ ಜೊತೆಯಲ್ಲಿ ವಿರೋಧ ಪಕ್ಷದ ಜವಾಬ್ದಾರಿಯಿದೆ. ನಮ್ಮ ಹಿರಿಯ ಶಾಸಕರು, ಸಂಸದರು ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಬೇಕು. ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಸರ್ಕಾರಿ ನೌಕರರಿಗೆ ಸಂಬಳ ಕೊಡಲೂ ಪರದಾಡುತ್ತಿದೆ ಎಂದರು.