

ಬೋರಗಾಂವ: ಪಾಲಕರು ಮಕ್ಕಳಲ್ಲಿ ಸಂಸ್ಕಾರ ಹಾಗೂ ಸಂಸ್ಕೃತಿಯ ಬೀಜಗಳನ್ನು ಬಿತ್ತಿ ಬೆಳೆಯಬೇಕು. ಮಕ್ಕಳನ್ನು ಉತ್ತಮ ವ್ಯಕ್ತಿಗಳನ್ನಾಗಿ ಮಾಡಬೇಕು. ಅವರನ್ನು ವ್ಯಸನದಿಂದ ದೂರವಿಟ್ಟು ಮಹಾನ್ ವ್ಯಕ್ತಿಗಳು ಮತ್ತು ಮುನಿಗಳ ಹಾಕಿಕೊಟ್ಟ ಸನ್ಮಾರ್ಗದಲ್ಲಿ ಮುನ್ನಡೆಯುವಂತೆ ಪ್ರೇರಣೆ ನೀಡಬೇಕು ಎಂದು ೧೦೮ ಸಂಯಮೂರ್ತಿ ವರ್ಧಮಾನಸಾಗರ ಮಹಾರಾಜ ಹೇಳಿದರು.
ಸಮೀಪದ ಶಿರದವಾಡ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪಂಚಕಲ್ಯಾಣ ಮಹಾ ಮಹೋತ್ಸವ ನಿಮಿತ್ತ ೧೩೦ ಮಕ್ಕಳ ಮುಂಜಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಹೆತ್ತವರ ಸೇವೆ ಮಾಡುವುದು. ಪ್ರತಿದಿನ ದೇವಸ್ಥಾನಕ್ಕೆ ಭೇಟಿ ನೀಡುವುದು. ವ್ಯಸನಗಳಿಂದ ದೂರವಿರುವುದು. ಮಾಂಸಾಹಾರ ಸೇವಿಸದಿರುವುದು. ಶುದ್ಧ ಆಹಾರ ಸೇವಿಸುವುದು. ಜೂಜಾಟ, ಕಳ್ಳತನ ಹಾಗೂ ಹಿಂಸೆ ಮಾಡಬಾರದು. ನಮ್ಮ ನಡವಳಿಕೆಯಿಂದಾಗಿ ಹೆತ್ತವರು, ಸಮಾಜ, ಗ್ರಾಮ, ದೇಶಕ್ಕೆ ಅವಮಾನಿಸಬಾರದು ಎಂದು ಮಕ್ಕಳಿಗೆ ದೀಕ್ಷೆ ನೀಡಿದರು.
ಶಾಲಾ ಶಿಕ್ಷಣದ ಜತೆಗೆ ಮಕ್ಕಳಿಗೆ ಆಧ್ಯಾತ್ಮಿಕ ಶಿಕ್ಷಣ ನೀಡುವುದು ಅಗತ್ಯ. ಒಳ್ಳೆಯ ಸಂಸ್ಕಾರ ಮಾನವ ಜನಾಂಗಕ್ಕೆ ಪ್ರಾಮುಖ್ಯ ತಂದುಕೊಡುತ್ತದೆ. ಜನರಿಗೆ ನೈತಿಕ ವಿಚಾರಗಳ ಬೋಧನೆಗಳಿಂದ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಮಕ್ಕಳಿಗೆ ಕಾರುಗಳನ್ನು ಕೊಡಿಸಬಾರದು. ಹಿಂದಿನ ಕಾಲದಲ್ಲಿ ನಮಗೆ ಯಾವುದೇ ಸೌಲಭ್ಯಗಳಿರಲಿಲ್ಲ, ಆದರೆ, ಜೀವನ ಸುಖಮಯವಾಗಿತ್ತು. ನಾವು ಕೇವಲ ಜನ್ಮ ನೀಡುವ ಮೂಲಕ ಪಾಲಕರ ಕರ್ತವ್ಯ ಪೂರೈಸಿದಂತಾಗುವುದಿಲ್ಲ. ಮಕ್ಕಳನ್ನು ಒಳ್ಳೆಯ ಸಂಸ್ಕಾರವುಳ್ಳ ಮನುಷ್ಯರನ್ನಾಗಿ ನಿರ್ಮಿಸಿದರೆ ಮಾತ್ರ ಜೀವನ ಅರ್ಥಪೂರ್ಣವಾಗುತ್ತದೆ ಎಂದು ವಿವರಿಸಿದರು.
ನಾಂದಣಿ ಜಗದ್ಗುರು ಸ್ವಸ್ತಿಶ್ರೀ ಜಿನಸೇನ್ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ, ಮುಂಜಿ ಮಾಡಿಸಿಕೊಳ್ಳುವ ಮಕ್ಕಳಿಗೆ ಧಾರ್ಮಿಕ ವಿಧಿವಿಧಾನ ನೆರವೇರಿಸಿ ಏಳು ವ್ಯಸನಗಳ ತ್ಯಜಿಸಲು ಸಲಹೆ ನೀಡಿದರು.