

ಬಸವಕಲ್ಯಾಣ: ಸಮಾಜದಲ್ಲಿ ನೈತಿಕತೆ ಬಲಪಡಿಸುವ ಚಳವಳಿ ನಡೆಯುವ ಅಗತ್ಯವಿದೆ ಎಂದು ಮಂಗಳೂರಿನ ಖ್ಯಾತ ಪ್ರವಚನಕಾರ ಮುಹಮ್ಮದ್ ಕುಂಞ್ ಪ್ರತಿಪಾದಿಸಿದರು.
ಜಮಾತೆ ಇಸ್ಲಾಮಿ ಹಿಂದ್ ತಾಲೂಕು ಶಾಖೆಯಿಂದ ನಗರದ ರಥ ಮೈದಾನದ ಬಿಕೆಡಿಬಿ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಮೂರು ದಿನದ ೯ನೇ ವಾರ್ಷಿಕ ಸಾರ್ವಜನಿಕ ಕುರಾನ್ ಪ್ರವಚನ ಕಾರ್ಯಕ್ರಮದಲ್ಲಿ ಶುಕ್ರವಾರ ಮಾನವನ ಘನತೆ ವಿಷಯ ಕುರಿತು ಮಾತನಾಡಿದ ಅವರು, ಎಲ್ಲರನ್ನು ಗೌರವಿಸಬೇಕಿರುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಕುರಾನ್ ಹೇಳುತ್ತದೆ ಎಂದರು.
ಬಸವಣ್ಣನವರ ಕರ್ಮಭೂಮಿ ಕಲ್ಯಾಣದಲ್ಲಿ ಎಂಟು ವರ್ಷಗಳಿಂದ ಕುರಾನ್ ಪ್ರವಚನ ನಡೆಸಿಕೊಂಡು ಬರಲಾಗುತ್ತಿದ್ದು, ಎಲ್ಲ ಧರ್ಮ, ಸಮುದಾಯದವರು ಭಾಗವಹಿಸುತ್ತಿದ್ದಾರೆ. ಅರಿವು, ಪರಸ್ಪರರನ್ನು ಅರಿತುಕೊಳ್ಳುವ ಕಾರ್ಯಕ್ರಮ ಇದಾಗಿದೆ. ಮಾನವೀಯತೆ ಬಲಪಡಿಸುವುದು ಕುರಾನ್ ಪ್ರವಚನದ ಉದ್ದೇಶ ಎಂದು ಹೇಳಿದರು.
ಆಕಾಶ ಮತ್ತು ಭೂಮಿ, ತೀರ-ತೀರ, ನಗರ-ನಗರಗಳ ಮಧ್ಯೆ ಅಂತರ ಕಡಿಮೆಯಾಗುತ್ತಿದೆ. ಒಂದು ಸ್ಥಳದಿಂದ ಇನ್ನೊಂದೆಡೆ ಮನುಷ್ಯ ವೇಗವಾಗಿ ತಲುಪಬಹುದು. ಆದರೆ ಮನುಷ್ಯರು ಮಾತ್ರ ಒಬ್ಬರಿಗೊಬ್ಬರು ದೂರವಾಗುತ್ತಿದ್ದಾರೆ. ಮನಸ್ಸುಗಳು ದೂರವಾಗುತ್ತಿವೆ. ಸಂಬಂಧಗಳು ಸಡಿಲವಾಗುತ್ತಿವೆ. ಇಂಥ ಕಾಲದಲ್ಲಿ ಸಂತೋಷ ನೀಡುವ, ಮನಸ್ಸುಗಳನ್ನು ಜೋಡಿಸುವ ಅಗತ್ಯವಿದೆ. ಯಾರೊಬ್ಬರಿಗೂ ನೋವಾಗುವಂಥ ಒಂದೇ ಒಂದು ವಿಷಯ ಈ ವೇದಿಕೆಯಲ್ಲಿ ಚರ್ಚೆ ಆಗದು ಎಂದರು.
ಜಮಾತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಡಾ.ಬೆಳಗಾವಿ ಮುಹಮ್ಮದ್ ಸಾದ್ ಮಾತನಾಡಿ, ಪವಿತ್ರ ಕುರಾನ್‌ನ ಪ್ರಿನ್ಸಿಪಲ್‌ಗಳು ಎಲ್ಲರಿಗೂ ಅನ್ವಯಿಸುತ್ತವೆ. ಐತಿಹಾಸಿಕ ನಗರದಲ್ಲಿ ಎಂಟು ವರ್ಷದಿಂದ ನಿರಂತರ ಪ್ರವಚನ ನಡೆಸಿಕೊಂಡು ಬರುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಹುಲಸೂರಿನ ಶ್ರೀ ಡಾ.ಶಿವಾನಂದ ಸ್ವಾಮೀಜಿ ಮಾತನಾಡಿ, ಶಾಂತಿ ಸೌಹಾರ್ದದಿಂದ ಜೀವನ ಸಾಗಿಸುವ ದೇಶ ಭಾರತ. ಸಂತರು, ಶರಣರು, ಮಹಾತ್ಮರು ಶಾಂತಿ, ಸೌಹಾರ್ದ, ಸಮಾನತೆ ಸಂದೇಶ ಸಾರಿದ ನೆಲ ನಮ್ಮದು. ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂದು ಬಸವಣ್ಣನವರು ಸಾರಿದ ಪವಿತ್ರ ನೆಲವೂ ಇದಾಗಿದೆ ಎಂದು ನುಡಿದರು.
ಬೀದರ್‌ನ ಶಾಹೀನ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ಮಾತನಾಡಿ, ಒಬ್ಬರಿಗೊಬ್ಬರು ತಿಳಿದುಕೊಳ್ಳಲು ಇಂಥ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ. ದೇಶ ಪ್ರಗತಿ ಸಾಧಿಸುವುದರ ಜತೆಗೆ ಶಾಂತಿ ಸೌಹಾರ್ದ, ಪರಸ್ಪರ ವಿಶ್ವಾಸ ಗಟ್ಟಿಗೊಳ್ಳುವ ಅಗತ್ಯವಿದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಮಾತನಾಡಿ, ಕಲ್ಯಾಣದಲ್ಲಿ ಪ್ರತಿವರ್ಷ ಕುರಾನ್ ಪ್ರವಚನ ನಡೆಸುತ್ತಿರುವುದು ಶ್ಲಾಘನೀಯ. ಶಾಂತಿ-ಸೌಹಾರ್ದ ಅವಶ್ಯಕ. ಎಲ್ಲ ಧರ್ಮ ಗ್ರಂಥಗಳು ಇದನ್ನೇ ಸಾರಿವೆ ಎಂದು ಹೇಳಿದರು.
ಸಹಾಯಕ ಆಯುಕ್ತ ಮುಕುಲ್ ಜೈನ್ ಮಾತನಾಡಿ, ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವ ವೇದಿಕೆ ಇದಾಗಿದೆ ಎಂದರು.
ಜೈಭಾರತ ಮಾತಾ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಹವಾ ಮಲ್ಲಿನಾಥ ಮಹಾರಾಜ ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ನೀರಾವರಿ ನಿಗಮದ ನಿವೃತ್ತ ಎಂಡಿ ಮಲ್ಲಿಕಾರ್ಜುನ ಗುಂಗೆ, ಪ್ರಮುಖರಾದ ಬಾಬು ಹೊನ್ನಾನಾಯಕ, ನೀಲಕಂಠ ರಾಠೋಡ, ಅರ್ಜುನ ಕನಕ, ಯಶೋಧಾ ರಾಠೋಡ, ನಿರ್ಮಲಾ ಶಿವಣಕರ, ತಹಸೀನಲಿ ಜಮಾದಾರ, ಅನ್ವರ್ ಭೋಸ್ಗೆ, ಜ್ಞಾನೇಶ್ವರ ಮುಳೆ, ಆಕಾಶ ಖಂಡಾಳೆ, ಶಿವಕುಮಾರ ಬಿರಾದಾರ, ಶಿವಕುಮಾರ ಶಟಗಾರ, ಅಹ್ಮದ್ ಮುನ್ಶಿ, ಜಮಾತೆ ಇಸ್ಲಾಮಿ ಹಿಂದ್ ತಾಲೂಕು ಅಧ್ಯಕ್ಷ ಹಾಫಿಜ್ ಮುಹಮ್ಮದ್ ಅಸ್ಲಂ, ಸ್ವಾಗತ ಸಮಿತಿ ಅಧ್ಯಕ್ಷ ಮುಜಾಹಿದ್ ಪಾಶಾ ಖುರೇಶಿ, ಗೌರವಾಧ್ಯಕ್ಷ ಡಾ.ಜಿ.ಎಸ್. ಭುರಳೆ, ಕಾರ್ಯಾಧ್ಯಕ್ಷ ಶಿವಾನಂದ ಮೇತ್ರೆ, ಮೌಲಾನಾ ಅಬ್ದುಲ್ ಸಲಾಂ ಹಾಸ್ಮಿ, ಶಾಂತಲಿಂಗ ಮಠಪತಿ, ಮಿರ್ಜಾ ಅನ್ವರ್ ಬೇಗ್, ನಯಿಮೋದ್ದಿನ್ ಚಾಬುಕಸವಾರ್, ಸಿಪಿಐ ಅಲಿಸಾಬ್ ಇದ್ದರು. ಅಲ್ತಾಫ್ ಅಹ್ಮದ್ ಸ್ವಾಗತಿಸಿದರು. ಏಜಾಜ್ ಬೊಬ್ರೆ ವಂದಿಸಿದರು. ಅಬ್ದುಲ್ ಖಾದರ್ ನಿರೂಪಣೆ ಮಾಡಿದರು.
ಧರ್ಮ ಗ್ರಂಥ, ವೇದ-ಉಪನಿಷತ್ತುಗಳು ಮಾನವನನ್ನು ಸೃಷ್ಟಿಸಿದ ಸೃಷ್ಟಿಕರ್ತನ ಬಗ್ಗೆ ಹೇಳಿಕೊಟ್ಟಿವೆ. ಬಸವಣ್ಣ, ವಿವೇಕಾನಂದರು ಸಹ ಇದನ್ನೇ ಹೇಳಿದ್ದಾರೆ. ನಿಮ್ಮ ಪೂರ್ವಿಕರು, ನಿಮ್ಮನ್ನು ಸೃಷ್ಟಿಸಿದವನನ್ನು ಆರಾಧಿಸಬೇಕು ಎಂದು ಕುರಾನ್ ಹೇಳಿಕೊಟ್ಟಿದೆ. ಸಂಕೀರ್ಣತೆ ಇಲ್ಲದ ನೇರ ಮಾರ್ಗವನ್ನು ತೋರಿಸಿಕೊಟ್ಟಿದೆ. ಬದುಕಿಗೆ ಬೆಳಕು ತೋರುವ ಸಂದೇಶಗಳು ಇದರಲ್ಲಿವೆ.
| ಮುಹಮ್ಮದ್ ಕುಂಞ್ ಖ್ಯಾತ ಪ್ರವಚನಕಾರ
ದೇಶ ಪ್ರಗತಿ ಸಾಧಿಸಿರುವುದು ಹೆಮ್ಮೆಯ ವಿಷಯ. ಕುಸಿಯುತ್ತಿರುವ ನೈತಿಕ ಪ್ರಜ್ಞೆ, ಮಾನವೀಯ ಮೌಲ್ಯಗಳು ಬೆಳೆಯಬೇಕು. ಎಲ್ಲರೂ ಒಂದಾಗಿ ಶಾಂತಿ-ಸೌಹಾರ್ದ, ಪರಸ್ಪರ ವಿಶ್ವಾಸ ಕಾಪಾಡಿಕೊಂಡು ಹೋಗಬೇಕಿದೆ. ಇದಕ್ಕೆ ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಬೇಕು.
| ಡಾ.ಬೆಳಗಾವಿ ಮುಹಮ್ಮದ್ ಸಾದ್ ಜಮಾತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ