ನೈಋತ್ಯ ರೈಲ್ವೆಗೆ 2,709 ಕೋಟಿ, ಧಾರವಾಡ-ಬೆಳಗಾವಿ ಮಾರ್ಗಕ್ಕೆ ಹಸಿರು ನಿಶಾನೆ

railway4
Published on

ಹುಬ್ಬಳ್ಳಿ: ಕೇಂದ್ರ ಮುಂಗಡ ಪತ್ರದಲ್ಲಿ ನೈಋತ್ಯ ರೈಲ್ವೆ ವಲಯಕ್ಕೆ 2,709 ಕೋಟಿ ರೂ. ಅನುದಾನ ನೀಡಿದ್ದು, ವಲಯ ಸ್ಥಾಪನೆಗೊಂಡ ನಂತರ ಇಷ್ಟೊಂದು ದೊಡ್ಡ ಮೊತ್ತದ ಅನುದಾನ ಮೀಸಲಿಟ್ಟಿರುವುದು ಇದೇ ಮೊದಲು ಎಂದು ಹೇಳಲಾಗಿದೆ.

ಬಹುದಿನಗಳ ಬೇಡಿಕೆಯಾಗಿದ್ದ ಕಿತ್ತೂರು ಮಾರ್ಗವಾಗಿ ಧಾರವಾಡ-ಬೆಳಗಾವಿ ಹೊಸ ಮಾರ್ಗಕ್ಕೆ (988.3 ಕೋಟಿ ರೂ.) ಮಂಜೂರಿ ನೀಡಲಾಗಿದೆ. ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿಯವರ ವಿಶೇಷ ಕಾಳಜಿಯಿಂದ ಈ ಮಾರ್ಗಕ್ಕೆ ಮಂಜೂರಿ ಸಿಕ್ಕಿದೆ.

ಹೊಸ ಮಾರ್ಗ ನಿರ್ವಣ, ರೈಲ್ವೆ ಮೇಲ್ಸೇತುವೆ, ಕೆಳ ಸೇತುವೆಗೆ ರಾಜ್ಯ ಸರ್ಕಾರದ ಪಾಲು 786 ಕೋಟಿ ರೂ. ಸೇರಿಸಿದರೆ ನೈಋತ್ಯ ರೈಲ್ವೆ ವಲಯಕ್ಕೆ 3,495 ಕೋಟಿ ರೂ. ಅನುದಾನ ಸಿಕ್ಕಂತಾಗುತ್ತದೆ.

ಬೆಂಗಳೂರು-ಜೊಲಾರಪೆಟ್ಟಿ, ಯಶವಂತಪುರ-ಯಲಹಂಕ ಮಧ್ಯೆ ಕೇಂದ್ರೀಕೃತ ಸ್ವಯಂಚಾಲಿತ ಸಿಗ್ನಲ್; 9 ಮೇಲ್ಸೇತುವೆ, 15 ಕೆಳಸೇತುವೆಗಳಿಗೆ ಮಂಜೂರಿ; ಬಳ್ಳಾರಿ, ಧರ್ಮಪುರ ನಿಲ್ದಾಣ ಮೇಲ್ದರ್ಜೆಗೇರಿಸಲು ಅನುಮತಿ ನೀಡಲಾಗಿದೆ. ಕೋಲಾರದಲ್ಲಿ ಬೋಗಿ ನಿರ್ಮಾಣ ಕೈಗಾರಿಕೆ ಬದಲು 495 ಕೋಟಿ ರೂ. ವೆಚ್ಚದಲ್ಲಿ ದುರಸ್ತಿ ಘಟಕ ಘೋಷಿಸಲಾಗಿದೆ.

1,754 ಕೋಟಿ ರೂ. ವೆಚ್ಚದಲ್ಲಿ 226 ಕೋಟಿ ರೂ. ವೆಚ್ಚದಲ್ಲಿ ಹೊಸ ಮಾರ್ಗ, 86 ಕೋಟಿ ರೂ. ವೆಚ್ಚದಲ್ಲಿ ದ್ವಿಪಥ ಮಾರ್ಗ, 53 ಕೋಟಿ ರೂ. ವೆಚ್ಚದಲ್ಲಿ ಸಂಚಾರಿ ಸೌಲಭ್ಯ, 20 ಕೋಟಿ ರೂ. ವೆಚ್ಚದಲ್ಲಿ ಸೇತುವೆ ಕಾಮಗಾರಿ, 122 ಕೋಟಿ ರೂ. ಪ್ರಯಾಣಿಕರ ಸೌಲಭ್ಯ ಮತ್ತಿತರ ಕಾಮಗಾರಿ ಕೈಗೊಳ್ಳಲು ತೀರ್ವನಿಸಲಾಗಿದೆ.

ಹೊಸ ಮಾರ್ಗ : ಕಲ್ಯಾಣದುರ್ಗ ಮಾರ್ಗದಲ್ಲಿ ರಾಯದುರ್ಗ-ತುಮಕೂರು (170 ಕೋಟಿ), ಬಾಗಲಕೋಟ-ಕುಡಚಿ (37 ಕೋಟಿ), ತುಮಕೂರು-ಚಿತ್ರದುರ್ಗ-ದಾವಣಗೆರೆ (128 ಕೋಟಿ), ಗದಗ-ವಾಡಿ (156 ಕೋಟಿ), ಶಿವಮೊಗ್ಗ-ಶಿಕಾರಿಕೊಪ್ಪ-ರಾಣೆಬೆನ್ನೂರ (10 ಕೋಟಿ) ಹೊಸ ಮಾರ್ಗಕ್ಕೆ ಹಸಿರು ನಿಶಾನೆ ತೋರಲಾಗಿದೆ.

ದ್ವಿಪಥ : ಹೊಸಪೇಟ-ಹುಬ್ಬಳ್ಳಿ-ಲೋಂಡಾ-ತಿನೈಘಾಟ್-ವಾಸ್ಕೊ ಡ ಗಾಮಾ (225 ಕೋಟಿ) , ಹುಟಗಿ-ಕುಡಗಿ-ಗದಗ (200 ಕೋಟಿ), ಯಲಹಂಕ-ಪೆನುಕೊಂಡ (155 ಕೋಟಿ), ಹುಬ್ಬಳ್ಳಿ-ಚಿಕ್ಕಜಾಜೂರು (171 ಕೋಟಿ), ಅರಸಿಕೆರೆ-ತುಮಕೂರು (202 ಕೋಟಿ), ಯಶವಂತಪುರ-ಚನ್ನಸಂದ್ರ (5 ಕೋಟಿ), ಬೈಯಪ್ಪನಹಳ್ಳಿ-ಹೊಸೂರು (5 ಕೋಟಿ) ಮಾರ್ಗ ದ್ವಿಪಥಕ್ಕೆ ಅನುಮೋದನೆ ನೀಡಲಾಗಿದೆ. ಬೆಂಗಳೂರು-ವೈಟ್​ಫಿಲ್ಡ್ ಮಧ್ಯೆ ಚತುಷ್ಪತ ಮಾರ್ಗಕ್ಕೆ 101 ಕೋಟಿ ರೂ. ಮೀಸಲಿಡಲಾಗಿದೆ.

ವಿದ್ಯುದ್ದೀಕರಣ : ಹೊಸಪೇಟೆ-ಹುಬ್ಬಳ್ಳಿ- ವಾಸ್ಕೊ ಡ ಗಾಮಾ (170 ಕೋಟಿ), ಮಿರಜ್-ಲೋಂಡಾ (70 ಕೋಟಿ), ಬೆಂಗಳೂರು-ಓಮಲೂರು (70 ಕೋಟಿ), ಚಿಕ್ಕಜಾಜೂರು-ಬಳ್ಳಾರಿ (70 ಕೋಟಿ), ಗದಗ-ಹುಟಗಿ (50), ಚಿಕ್ಕಬಾಣಾವರ-ಹುಬ್ಬಳ್ಳಿ (75 ಕೋಟಿ), ಹೊಸಪೇಟ-ಸ್ವಾಮಿಹಳ್ಳಿ (25 ಕೋಟಿ), ಬೀರೂರು-ತಾಳಗುಪ್ಪ (25 ಕೋಟಿ), ಅರಸಿಕೆರೆ-ಹಾಸನ ಸೇರಿ ಮೈಸೂರು-ಹಾಸನ-ಮಂಗಳೂರು (60 ಕೋಟಿ), ಮೈಸೂರು-ಚಾಮರಾಜನಗರ (20 ಕೋಟಿ), ಕಡೂರು-ಚಿಕ್ಕಮಗಳೂರು (25 ಕೋಟಿ), ಚಿಕ್ಕಬಾಣಾವರ-ಹಾಸನ (30 ಕೋಟಿ), ಬಂಗಾರಪೇಟೆ-ಯಲಹಂಕ (30 ಕೋಟಿ) ಮಾರ್ಗಗಳ ವಿದ್ಯುದ್ದೀಕರಣ ಕಾಮಗಾರಿ ಈಗಾಗಲೇ ನಡೆಯುತ್ತಿದೆ.

ಕೇಂದ್ರ ಬಜೆಟ್ ತೃಪ್ತಿಕರವಾಗಿದ್ದು, ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳಿಗೆ ಉತ್ತೇಜನ ನೀಡಿದೆ. - ಎ.ಕೆ. ಸಿಂಗ್, ಎಸ್​ಡಬ್ಲ್ಯುಆರ್ ಜಿಎಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net