

ಹಾಸನ: ಹುಬ್ಬಳ್ಳಿಯ ಖಾಸಗಿ ಕಾಲೇಜಿನ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಭೀಕರ ಹತ್ಯೆಯನ್ನು ಖಂಡಿಸಿ ಕೂಡಲೇ ಉನ್ನತ ಮಟ್ಟದ ತನಿಖೆ ಮಾಡುವಂತೆ ಎಬಿವಿಪಿ ಸಂಘಟನೆಯ ವಿದ್ಯಾರ್ಥಿಗಳು ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಅವರಿಗೆ ಮನವಿ ಸಲ್ಲಿಸಿದರು.
ಎಬಿವಿಪಿ ತಾಲೂಕು ಸಹ ಸಂಚಾಲಕ ಪ್ರೀತಮ್ ಸುದ್ದಿಗಾರರೊಂದಿಗೆ ಮಾತನಾಡಿ, ಶಾಲಾ-ಕಾಲೇಜುಗಳು ಜ್ಞಾನದ ದೇಗುಲಗಳು. ಇಂತಹ ದೇಗುಲದಲ್ಲಿ ಹಾಡಹಗಲೇ ವಿದ್ಯಾರ್ಥಿನಿ ನೇಹಾ ಹಿರೇಮಠಳ ಭೀಕರ ಹತ್ಯೆ ಮಾಡಿರುವ ಘಟನೆ ನಿಜಕ್ಕೂ ವಿದ್ಯಾರ್ಥಿ ಸಮುದಾಯದಲ್ಲಿ ಭಯದ ವಾತಾವರಣ ಮೂಡಿಸಿದಂತಾಗಿದೆ. ಖಾಸಗಿ ಕಾಲೇಜಿನಲ್ಲಿ ಎಂಸಿಎ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ನೇಹಾ ಹಿರೇಮಠ ಅವಳನ್ನು ಫಯಾಜ್ ಎಂಬಾತ ಅವಳನ್ನು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಈ ಪ್ರೀತಿಯನ್ನು ವಿದ್ಯಾರ್ಥಿನಿ ನಿರಾಕರಿಸಿದಕ್ಕಾಗಿ ಆಕೆಯ ಕಾಲೇಜಿಗೆ ಅಕ್ರಮವಾಗಿ ಪ್ರವೇಶಿಸಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದರು.
ಕಾಲೇಜಿನ ಒಳಗೆ ಬಂದು ವಿದ್ಯಾರ್ಥಿನಿಯನ್ನು ಹತ್ಯೆ ಮಾಡಲು ಸಾಧ್ಯವಾಗಿರಬೇಕಾದರೆ ಕೊಲೆಗಾರನಿಗೆ ಕಾನೂನಿನ ಯಾವುದೇ ಭಯ ಇಲ್ಲದೆ ರಾಜಾರೋಷವಾಗಿ ಇಂತಹ ಕೃತ್ಯ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಘಟನೆ ನೋಡಿದರೇ ನಮ್ಮ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಷ್ಟು ಕುಸಿದು ಹೋಗಿದೆ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ. ಪೊಲೀಸರು ಕೂಡಲೇ ಸೂಕ್ತ ತನಿಖೆಯನ್ನು ಕೈಗೊಂಡು, ಅಪರಾಧಿಗೆ ಉಗ್ರ ಶಿಕ್ಷೆ ಆಗುವ ಹಾಗೆ ಮಾಡಿ ವಿದ್ಯಾರ್ಥಿನಿಯ ಕುಂಟುಂಬಕ್ಕೆ ನ್ಯಾಯ ಒದಗಿಸಬೇಕಾಗಿದೆ. ಜತೆಗೆ ರಾಜ್ಯಾಧ್ಯಂತ ಪೊಲೀಸರು ಶಾಲಾ- ಕಾಲೇಜುಗಳ ಬಳಿ ಕಾರ್ಯನಿರ್ವಹಿಸಿ ಸಂಭಾವ್ಯ ಘಟನೆಗಳನ್ನು ತಡೆಯಲು ಪ್ರಯತ್ನಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಚಿರಂತ್, ಶ್ರೀನಿವಾಸ್ ಸಾವರ್ಕರ್, ಜೀವನ್ ಇತರರು ಉಪಸ್ಥಿತರಿದ್ದರು.