ನೇರವಾಗಿ ಭೇಟಿ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ

8KMD-1
Published on

ಕೆ.ಎಂ.ದೊಡ್ಡಿ: ಜನರು ತಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಲು ಮಧ್ಯವರ್ತಿಗಳ ಜತೆ ಬರುವುದನ್ನು ನಿಲ್ಲಿಸಿ ನೇರವಾಗಿ ನನ್ನನ್ನು ಭೇಟಿ ಮಾಡಿ ಎಂದು ಶಾಸಕ ಕದಲೂರು ಉದಯ್ ತಿಳಿಸಿದರು.


ಇಲ್ಲಿನ ಶಾಸಕರ ಕಚೇರಿಯಲ್ಲಿ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಜನರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಮದ್ದೂರು ಕ್ಷೇತ್ರದ ಜನತೆ ಯಾವುದೇ ಸಾರ್ವಜನಿಕ ಕೆಲಸ ಕಾರ್ಯಗಳು ಆಗಬೇಕಾದರೆ ನನ್ನನ್ನು ಭೇಟಿ ಮಾಡಿ ಎಂದರು.


ಚಿಕ್ಕರಸಿನಕೆರೆ ಹೋಬಳಿ ಸೇರಿದಂತೆ ಮದ್ದೂರು ಕ್ಷೇತ್ರದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಹೆಚ್ಚು ದೂರುಗಳಿದ್ದು, ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಿ ರೈತರನ್ನು ಕಚೇರಿಗೆ ಅಲೆಸದೆ ಸಮಸ್ಯೆಗಳನ್ನು ಬಗೆಹರಿಸುವಂತೆ ಸೂಚಿಸಿದರು.


ಮುಂದಿನ ವಾರ ಚಿಕ್ಕರಸಿನಕೆರೆಗೆ ಭೇಟಿ ನೀಡಲಿದ್ದು, ತಮ್ಮ ಗ್ರಾಮಗಳಿಗೆ ಭೇಟಿ ನೀಡುವ ವೇಳೆ ಅಲ್ಲಿನ ಸಮಸ್ಯೆಗಳ ಪಟ್ಟಿ ಮಾಡಿ ಶೀಘ್ರ ಬಗೆಹರಿಸುವುದಾಗಿ ಭರವಸೆ ನೀಡಿದರು.


ಕೆ.ಶೆಟ್ಟಹಳ್ಳಿ, ಕಡಿಲುವಾಗಿಲು, ಲಕ್ಷ್ಮೇಗೌಡನದೊಡ್ಡಿ, ಯಡಗನಹಳ್ಳಿ, ಕಾಡು ಕೊತ್ತನಹಳ್ಳಿ ಗ್ರಾಮಗಳಿಗೆ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಕಲ್ಪಿಸಲು ಸಾರಿಗೆ ಇಲಾಖೆಯ ಮಂಡ್ಯ ಡಿಪೋ ಮ್ಯಾನೇಜರ್ ಅವರಿಗೆ ದೂರವಾಣಿ ಕರೆ ಮಾಡಿ ಶೀಘ್ರದಲ್ಲೇ ಬಸ್ ಸೌಕರ್ಯ ಕಲ್ಪಿಸಲು ವ್ಯವಸ್ಥೆ ಮಾಡಿ ಎಂದು ಸೂಚಿಸಿದರು.
ಕಪ್ಪರೆಕೊಪ್ಪಲು ಗ್ರಾಮದ ನಾಲೆಯಲ್ಲಿ ಗಿಡಗಂಟಿಗಳು ಬೆಳೆದು ನೀರು ಜಮೀನಿಗಳಿಗೆ ಸರಾಗವಾಗಿ ಹರಿಯಲು ವಿಳಂಬವಾಗುತ್ತಿದ್ದು, ನಾಲೆ ಸ್ವಚ್ಛತೆಗೆ ಕ್ರಮವಹಿಸಿ ಎಂದು ಗ್ರಾಮಸ್ಥರು ಮನವಿ ನೀಡಿದ ಹಿನ್ನೆಲೆಯಲ್ಲಿ ಸ್ಥಳದಲ್ಲೇ ಕಾವೇರಿ ನೀರಾವರಿ ಅಧಿಕಾರಿಗಳಿಗೆ ಕ್ರಮವಹಿಸಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು. ಕೆಲವು ಗ್ರಾಮಗಳಲ್ಲಿ ರೈತರ ಜಮೀನುಗಳಿಗೆ ನೀರಿನ ಕೊರತೆ ಇದ್ದು, ಟ್ರಾನ್ಸ್‌ಫಾರ್ಮರ್ ಅಳವಡಿಸುವಂತೆ ವಿವಿಧ ಗ್ರಾಮಗಳ ರೈತರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಶಾಸಕರು ಸ್ಥಳದಲ್ಲಿದ್ದ ಸೆಸ್ಕ್ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.


ಹರಳಹಳ್ಳಿ ಗ್ರಾಮದ ಮಂಚೇಗೌಡ ಅವರು ಕ್ಯಾನ್ಸರ್ ಕಾಯಿಲೆಯಿಂದ ನರಳುತಿದ್ದು, ಅವರಿಗೆ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯ ನಿರ್ದೇಶಕರಿಗೆ ದೂರವಾಣಿ ಕರೆ ಮಾಡಿ ಚಿಕಿತ್ಸೆ ಸೌಲಭ್ಯ ಕಲ್ಪಿಸುವಂತೆ ಕೋರಿದರು. ಇದಲ್ಲದೇ, ಬಿದರಹೊಸಹಳ್ಳಿ ಗ್ರಾಮದ ಮಂಜು ಅವರು ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ಆರ್ಥಿಕ ನೆರವು ನೀಡಿದರು.
ಕಾವೇರಿ ನೀರಾವರಿ ನಿಗಮದ ಎಇ ಪ್ರಶಾಂತ್‌ಲಿಂಗಯ್ಯ, ಜೆಇ ಅವಿನಾಶ್, ಸರ್ಕಲ್ ಇನ್ಸ್‌ಪೆಕ್ಟರ್ ಆನಂದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಟ್ಟನಹಳ್ಳಿ ಶಿವಲಿಂಗೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net