

ಹನಗೋಡು: ದುಶ್ಚಟ ಮುಕ್ತ ಸಮಾಜ ನಿರ್ಮಾಣ ಮಾಡುವುದು ನಮ್ಮ ಗುರಿಯಾಗಲಿ ಎಂದು ಸಂಪನ್ಮೂಲ ವ್ಯಕ್ತಿ ಸೋಮಶೇಖರ್ ತಿಳಿಸಿದರು.
ನೇರಳಕುಪ್ಪೆ ಸರ್ಕಾರಿ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವಲಯ ಕಚೇರಿ ಶನಿವಾರ ಹಮ್ಮಿಕೊಂಡಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿ ಜೀವನ ಬಂಗಾರಮಯವಾದದ್ದು. ಆದರೆ ಚಿಕ್ಕ ವಯಸ್ಸಿನಲ್ಲಿಯೇ ದುಶ್ಚಟಗಳು ಅಂಟಿದರೆ ಬದುಕೇ ಹಾಳಾಗುತ್ತದೆ. ಇದರಿಂದ ಸಮಾಜದಲ್ಲಿ ಹಲವು ಅಪರಾಧ ಚಟುವಟಿಕೆಗಳೂ ನಡೆಯುತ್ತದೆ ಎಂದು ಅವರು ಎಚ್ಚರಿಸಿದರು.
ಪ್ರತಿ ವರ್ಷ ಶಾಲಾ,ಕಾಲೇಜುಗಳಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳ ಮುಖಾಂತರ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ಇದರ ಸದುಪಯೋಗ ಪಡೆಯಿರಿ ಎಂದರು.
ಪಾಲಕರಿಗೆ ಗೌರವ ಕೊಡಿ: ಮುಖ್ಯಶಿಕ್ಷಕ ಕುಮಾರಸ್ವಾಮಿ ಮಾತನಾಡಿ ಮದ್ಯಪಾನ, ಧೂಮಪಾನದಂತಹ ದುಶ್ಚಟಗಳು ವಿದ್ಯಾರ್ಥಿಗಳ ದೌಹಿಕ, ಮಾನಸಿಕ ನೆಮ್ಮದಿಗೆ ಕೊಳ್ಳಿ ಇಡುತ್ತವೆ. ಅವುಗಳಿಂದ ದೂರವಿದ್ದರೆ ಬಾಳು ಬಂಗಾರವಾಗುತ್ತದೆ ಎಂದರು. ಪಾಲಕರು ಕಷ್ಟಪಟ್ಟು ಪಾಲನೆ ಮಾಡಿ ಮಕ್ಕಳನ್ನು ಬೆಳೆಸುತ್ತಿದ್ದಾರೆ. ಅವರಿಗೆ ಮಕ್ಕಳು ಗೌರವ ನೀಡಬೇಕು. ಕೆಟ್ಟ ಸ್ನೇಹಿತರ ಸಹವಾಸ ಬಿಡಬೇಕು. ಮೊಬೈಲ್ ಫೋನ್ ಬಳಕೆಯನ್ನು ಆದಷ್ಟು ಕಡಿಮೆ ಮಾಡಬೇಕು ಎಂದರು.
ಬಿಡುವಿನ ವೇಳೆಯಲ್ಲಿ ತಂದೆ- ತಾಯಿಯರಿಗೆ ನೆರವಾಗಬೇಕು. ಉತ್ತಮ ಪುಸ್ತಕ ಓದುವುದು, ಬರೆಯುವುದು, ಕ್ರೀಡೆಯಲ್ಲಿ ಭಾಗವಹಿಸುವುದು, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು ನಮ್ಮ ಹವ್ಯಾಸವಾದರೆ ಸುಂದರ ಭವಿಷ್ಯ ನಮ್ಮದಾಗುತ್ತದೆ. ಸಮಾಜದಲ್ಲಿ ಗೌರವಾದರ ದೊರಕುತ್ತದೆ ಎಂದು ಕುಮಾರಸ್ವಾಮಿ ಮಕ್ಕಳಿಗೆ ಕಿವಿಮಾತು ಹೇಳಿದರು. ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯ ನೇರಳಕುಪ್ಪೆ ಮಹದೇವ, ಯೋಜನೆಯ ಮೇಲ್ವಿಚಾರಕಿ ಪುಷ್ಪಲತಾ ಮಾತನಾಡಿದರು. ದುಶ್ಚಟ ಮುಕ್ತ ಸಮಾಜ ನಿರ್ಮಾಣ ಮಾಡುವುದಾಗಿ ವಿದ್ಯಾರ್ಥಿ ಗಳು ಪ್ರತಿಜ್ಞೆ ಸ್ವೀಕರಿಸಿದರು. ಒಕ್ಕೂಟದ ಅಧ್ಯಕ್ಷೆ ಕನಕಾ, ಶಿಕ್ಷಕರಾದ ಕೆ.ಆರ್. ಸ್ವಾಮಿ, ತಿ, ಪುನೀತ್, ಸೇವಾಪ್ರತಿನಿಧಿ ಸ್ವಾಮಿ ಇತರರು ಇದ್ದರು.