ನೇರಪಾವತಿ ವ್ಯವಸ್ಥೆ ಜಾರಿಗೊಳಿಸಿ

Powrakarmika
Published on

ಚಿತ್ರದುರ್ಗ: ಗುತ್ತಿಗೆ ಪದ್ಧತಿ ರದ್ದುಗೊಳಿಸಿ, ನೇರಪಾವತಿ ವ್ಯವಸ್ಥೆ ಜಾರಿಗೊಳಿಸುವ ಮೂಲಕ ಸಕಾಲಕ್ಕೆ ಮಾಸಿಕ ವೇತನ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ಸಂಘದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

ಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಸಕಾಲಕ್ಕೆ ವೇತನ ಪಾವತಿಯಾಗುತ್ತಿಲ್ಲ. ಆದ್ದರಿಂದ ನೇರಪಾವತಿಯೊಂದೆ ಇದಕ್ಕೆ ಪರಿಹಾರವಾಗಿದ್ದು, ಕೂಡಲೇ ಕ್ರಮವಹಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.

ರಾಜ್ಯ ಸರ್ಕಾರ ‘ಸಿ’ ಮತ್ತು ‘ಡಿ’ ದರ್ಜೆಯ ಹೊರಗುತ್ತಿಗೆ ನೌಕರರನ್ನು ನೇಮಿಸಿಕೊಳ್ಳುವ ವೇಳೆ ಪರಿಶಿಷ್ಟ ಜಾತಿ, ಹಿಂದುಳಿದ ವರ್ಗ, ಮಹಿಳಾ ಮೀಸಲಾತಿ ಘೋಷಿಸಿದೆ. ಸ್ಥಳೀಯ ಸಂಸ್ಥೆಗಳು, ಸರ್ಕಾರಿ ಆಸ್ಪತ್ರೆಗಳು ಸೇರಿ ವಿವಿಧ ಇಲಾಖೆಗಳಲ್ಲಿ 1.75 ಲಕ್ಷಕ್ಕೂ ಅಧಿಕ ಮಂದಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಪೈಕಿ ಬಹುತೇಕ ನೌಕರರಿಗೆ ಸಕಾಲಕ್ಕೆ ವೇತನ, ಭವಿಷ್ಯ ನಿಧಿ, ಕನಿಷ್ಟ ವೇತನ ಯಾವುದೂ ಸಮರ್ಪಕವಾಗಿ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ಈಗಾಗಲೇ ಕರ್ತವ್ಯದಲ್ಲಿರುವ ಬಹುತೇಕರು ದಲಿತ, ಹಿಂದುಳಿದವರೇ ಆಗಿದ್ದಾರೆ. ಆದ್ದರಿಂದ ಏಜೆನ್ಸಿಗಳ ಮೂಲಕ ಹೊಸದಾಗಿ ನೇಮಿಸಿಕೊಳ್ಳುವವರಿಗೆ ಮೀಸಲಾತಿ ಅನ್ವಯವಾಗಲು ತಿದ್ದುಪಡಿ ಮಾಡಬೇಕು. ಇಲ್ಲದಿದ್ದರೆ, 20 ವರ್ಷದಿಂದ ದುಡಿಯುತ್ತಿರುವವರಿಗೆ ಏಜೆನ್ಸಿಗಳು ಸಂಕಷ್ಟಕ್ಕೆ ಸಿಲುಕಿಸುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಹಕ್ಕು ಕೇಳಿದರೆ, ಕೆಲಸದಿಂದ ಕೈಬಿಡುವುದಾಗಿ ಬೆದರಿಕೆ ಹಾಕುತ್ತಾರೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ರಾಜ್ಯದೆಲ್ಲ ಹೊರಗುತ್ತಿಗೆ ನೌಕರರನ್ನು ಗುತ್ತಿಗೆ ಬದಲು ನೇರಪಾವತಿ ವ್ಯಾಪ್ತಿಗೆ ತರಬೇಕು ಎಂದು ಕೋರಿದರು.

ರಾಜ್ಯ ಸಂಘದ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ, ಪದಾಧಿಕಾರಿಗಳಾದ ಶಿವರಾಜು, ನವೀನ್, ತನ್ವಿರ್, ತಿಪ್ಪೇಶ್ ನಾಯಕ್, ದೊಡ್ಡಯ್ಯ, ಭಾಷಾ, ಅರ್ಶದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net