

ರಾಯಬಾಗ: ರಾಜ್ಯದ ನಗರ, ಸ್ಥಳೀಯ ಸಂಸ್ಥೆ ಪೌರ ಕಾರ್ಮಿಕರನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸಬೇಕೆಂದು ಆಗ್ರಹಿಸಿ ಪಟ್ಟಣ ಪಂಚಾಯಿತಿ ಆವರಣದಲ್ಲಿ ಮಂಗಳವಾರ ಪೌರ ಕಾರ್ಮಿಕರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದರು.
ಪೌರ ಕಾರ್ಮಿಕರಿಗೆ ಜ್ಯೋತಿ ಸಂಜೀವಿನಿ, ಕೆಜಿಐಡಿ ಸೇವೆ ಸೇರಿ ಸರ್ಕಾರಿ ನೌಕರರು ಪಡೆಯುವ ಸೌಲಭ್ಯ ನೀಡುವುದು ಮತ್ತು ರಾಜ್ಯ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆಯಡಿ ಕೆಲಸ ನಿರ್ವಹಿಸುತ್ತಿರುವ ಲೋಡರ್ಸ್, ಕ್ಲೀನರ್, ವಾಹನ ಚಾಲಕರು, ನೀರು ಸರಬರಾಜು, ಮಾಲಿ, ಸ್ವಚ್ಛತಾ ಮೇಲ್ವಿಚಾರಕರು, ಕಂಪ್ಯೂಟರ್ ನಿರ್ವಾಹಕರು, ಒಳಚರಂಡಿ ಸ್ವಚ್ಛತಾ ಸಹಾಯಕರು ಸೇರಿ ವಿವಿಧ ವೃಂದದ ಹೊರಗುತ್ತಿಗೆ ಕಾರ್ಮಿಕರನ್ನು ನಗರ, ಸ್ಥಳೀಯ ಸಂಸ್ಥೆಗಳಿಂದ ನೇರ ಪಾವತಿಗೆ ಅಳವಡಿಸುವುದು. ಸಮಾನ ಕೆಲಸಕ್ಕೆ ಸಮಾನ ವೇತನ, ವಿಶೇಷ ನೇಮಕಾತಿಯಡಿ ಎಸ್‌ಎಫ್‌ಸಿ ಅನುದಾನದಿಂದ ವೇತನ ನೀಡಬೇಕೆಂದು ಹಕ್ಕೊತ್ತಾಯ ಮಾಡಿದರು.
ಪೌರಕಾರ್ಮಿಕರ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಾರುತಿ ಬಳ್ಳಾರಿ, ತಾಲೂಕಾಧ್ಯಕ್ಷ ಗಣೇಶ ಬಳ್ಳಾರಿ, ಉಪಾಧ್ಯಕ್ಷ ವಸಂತ ಮಾಳಿ, ಕಾರ್ಯದರ್ಶಿ ದಯಾನಂದ ಹೊಸಮನಿ, ವಿನಾಯಕ ಮಾಳಿ, ವಿಠ್ಠಲ ಯಡ್ರಾವೆ, ನಾಗೇಶ ಬಳ್ಳಾರಿ, ಸುರೇಂದ್ರ ಬಳ್ಳಾರಿ, ರಾಮಾ ಬಳ್ಳಾರಿ ಇತರರಿದ್ದರು.
ಚಿಂಚಲಿಯಲ್ಲಿ ಎಸಿಗೆ ಮನವಿ: ವಿವಿಧ ಬೇಡಿಕೆಗೆ ಆಗ್ರಹಿಸಿ ಚಿಂಚಲಿ ಪಟ್ಟಣದ ಪೌರಕಾರ್ಮಿಕರು ಪಟ್ಟಣ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಭೇಟಿ ನೀಡಿದ ಉಪವಿಭಾಗಾಧಿಕಾರಿ ಸುಭಾಷ ಸಂಪಗಾವಿ ಪೌರ ಕಾರ್ಮಿಕರಿಂದ ಮನವಿ ಸ್ವೀಕರಿಸಿದರು.
ಪಪಂ ಮುಖ್ಯಾಧಿಕಾರಿ ವಿ.ಆರ್.ಬಳ್ಳಾರಿ, ಪೌರಕಾರ್ಮಿಕರಾದ ಗೋಪಾಲ ಪರೀಟ, ನಾಮದೇವ ಟೊಣ್ಣೆ, ರವಿ ಖೋತ, ಶ್ರಾವಣ ಕಾಂಬಳೆ, ಮೀರಾಸಾಬ್ ಕೋಥಳಿ, ಸಂಜು ನಿಂಗನೂರೆ ಇತರರಿದ್ದರು.