ನೇರ ರೈಲ್ವೆ ಮಾರ್ಗಕ್ಕೆ 150 ಕೋಟಿ ರೂ. ಅನುದಾನ

CTD -GOVINDA KARAJOLA
Published on

ಚಿತ್ರದುರ್ಗ: ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲ್ವೆ ಮಾರ್ಗಕ್ಕೆ ಕೇಂದ್ರದ ಬಜೆಟ್‌ನಲ್ಲಿ 150 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಸಂಸದ ಗೋವಿಂದ ಎಂ.ಕಾರಜೋಳ ಅವರು ಬುಧವಾರ ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 191 ಕಿ.ಮೀ. ಉದ್ದದ ಈ ನೇರ ರೈಲು ಮಾರ್ಗವನ್ನು ರಾಜ್ಯ ಸರ್ಕಾರದೊಂದಿಗೆ ವೆಚ್ಚ ಹಂಚಿಕೆ ಆಧಾರದ ಮೇಲೆ ಕೈಗೆತ್ತಿಕೊಳ್ಳಲಾಗಿದೆ.
ಇದರಲ್ಲಿ ರಾಜ್ಯ ಸರ್ಕಾರ ಉಚಿತವಾಗಿ ಅವಶ್ಯವಿರುವ ಭೂಮಿ ಹಾಗೂ ಶೇ.50 ನಿರ್ಮಾಣ ವೆಚ್ಚವನ್ನು ಹಂಚಿಕೊಳ್ಳುತ್ತಿದೆ. ಒಟ್ಟಾರೆ ಯೋಜನೆ ವೆಚ್ಚ 2,142.35 ಕೋಟಿ ರೂ. ಆಗಲಿದ್ದು, ಮಾರ್ಚ್ 2024ರ ವರೆಗೆ 359.32 ಕೋಟಿ ರೂ. ವೆಚ್ಚವಾಗಿದೆ. ಈ ಮಾರ್ಗ ಹೊರತುಪಡಿಸಿ ಕಳೆದ ಏಪ್ರಿಲ್ 1ಕ್ಕೆ ಅಂತ್ಯಗೊಂಡಿರುವಂತೆ ರಾಜ್ಯದಲ್ಲಿ ಅಂದಾಜು 47,016 ಕೋಟಿ ರೂ. ವೆಚ್ಚದ 21 ಹೊಸ ಮಾರ್ಗಗಳು ಹಾಗೂ 10 ಡಬ್ಲಿಂಗ್ ಕಾಮಗಾರಿಗಳು ಸೇರಿ 3,840 ಕಿ.ಮೀ. ಉದ್ದದ 31 ಮೂಲಸೌಲಭ್ಯ ಯೋಜನೆಗಳು, ಪ್ಲಾನಿಂಗ್, ಅನುಮೋದನೆ ಹಾಗೂ ಪ್ರಗತಿ ಹಂತದಲ್ಲಿವೆ ಎಂದು ತಿಳಿಸಿದ್ದಾರೆ.
ಇದರಲ್ಲಿ 1,302 ಕಿ.ಮೀ. ಉದ್ದ ಮಾರ್ಗದ ಕೆಲಸವನ್ನು ಪೂರ್ಣಗೊಳಿಸಿ ಕಾರ್ಯಾರಂಭ ಮಾಡಲಾಗಿದೆ. ಮಾರ್ಚ್ 2024ರವರೆಗೆ 17,382 ಕೋಟಿ ರೂ.ವೆಚ್ಚವಾಗಿದೆ.
21 ಹೊಸ ಮಾರ್ಗಗಳ ಪೈಕಿ 33,125 ಕೋಟಿ ರೂ. ವೆಚ್ಚದಲ್ಲಿ, 2,556 ಕಿ.ಮೀ. ಉದ್ದದ ಮಾರ್ಗಗಳಲ್ಲಿ ಈಗಾಗಲೇ ಮಾರ್ಚ್ 2024 ರ ಅಂತ್ಯದ ವೇಳೆಗೆ ರೂ.7,592 ಕೋಟಿ ರೂ. ವೆಚ್ಚದಲ್ಲಿ 395 ಕಿ.ಮೀ ಉದ್ದದ ಮಾರ್ಗ ಪೂರ್ಣವಾಗಿದೆ. 13,891 ಕೋಟಿ ರೂ. ವೆಚ್ಚದ 1,284 ಕಿ.ಮೀ. ಉದ್ದದ 10 ಡಬ್ಲಿಂಗ್ ಯೋಜನೆಗಳ ಪೈಕಿ, ಈಗಾಗಲೇ 9791 ಕೋಟಿ ರೂ. ವೆಚ್ಚದಲ್ಲಿ 907 ಕಿ.ಮೀ. ಡಬ್ಲಿಂಗ್ ಕಾಮಗಾರಿ ಪೂರ್ಣಗೊಂಡಿದೆ. 2014ರಿಂದ ರಾಜ್ಯದಲ್ಲಿ ರೈಲ್ವೆ ಯೋಜನೆಗಳಿಗೆ ಅನುದಾನ ಹಂಚಿಕೆ, ಯೋಜನೆಗಳ ಪೂರ್ಣಗೊಳಿಸುವಿಕೆ ಕಾಮಗಾರಿ ವೇಗದಲ್ಲಿ ಗಣನೀಯವಾಗಿ ಏರಿಕೆಯಾಗಿದೆ ಎಂದಿದ್ದಾರೆ.
ಕರ್ನಾಟಕದ 2009-2014ರ ವರೆಗಿನ ರೈಲ್ವೆ ಯೋಜನೆಗಳಿಗೆ 7,835 ಕೋಟಿ ರೂ. ದೊರಕಿದ್ದರೆ, ಎನ್‌ಡಿಎ ಆಡಳಿತಾವಧಿ 2024-25 ನೇ ಸಾಲಿನ ಒಂದೇ ವರ್ಷದಲ್ಲಿ 7,559 ಕೋಟಿ ರೂ. ಅನುದಾವನ್ನು ರಾಜ್ಯಕ್ಕೆ ನೀಡಲಾಗಿದೆ. ಇದು ಯುಪಿಎ ಆಡಳಿತಾವಧಿ ಅನುದಾನಕ್ಕೆ ಹೋಲಿಕೆ ಮಾಡಿದರೆ ಒಂದೇ ವರ್ಷದಲ್ಲಿ ಬರೋಬ್ಬರಿ 9 ಪಟ್ಟು ಹೆಚ್ಚಿನ ಅನುದಾನ ಒದಗಿಸಲಾಗಿದೆ.
ಯುಪಿಎ ಆಡಳಿತಾವಧಿ 2009ರಿಂದ 2014ರ ವರೆಗೆ ಪ್ರತಿ ವರ್ಷ 113 ಕಿ.ಮೀ. ಸರಾಸರಿಯಂತೆ 565 ಕಿ.ಮೀ. ರೈಲ್ವೆ ಹಳಿ ನಿರ್ಮಾಣವಾಗಿದ್ದರೆ, ಎನ್‌ಡಿಎ ಅವಧಿ 2014ರಿಂದ 2024ರ ವರೆಗೆ ವರ್ಷಕ್ಕೆ ಸರಾಸರಿ 163 ಕಿ.ಮೀ. ನಂತೆ 1,633 ಕಿ.ಮೀ. ರೈಲ್ವೆ ಹಳಿ ನಿರ್ಮಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net