ನೇರ ರೈಲು ಮಾರ್ಗ ಕಾಮಗಾರಿಗೆ ಶೀಘ್ರ ಚಾಲನೆ

CTD RILU MEEITNG
Published on

ಚಿತ್ರದುರ್ಗ: ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗದ ಭರಮಸಾಗರ-ಚಿತ್ರದುರ್ಗ ನಡುವಿನ 29 ಕಿ.ಮೀ ಉದ್ದದ ಈ ಮಾರ್ಗಕ್ಕೆ ಅಗತ್ಯವಿರುವ ಭೂಮಿಗೆ ಸಂಬಂಧಿಸಿದಂತೆ ಶೇ.90 ಭೂ ಸ್ವಾಧೀನ ಪ್ರಕ್ರಿಯೆ ಮುಕ್ತಾಯಗೊಂಡಿದೆ ಎಂದು ಸಂಸದ ಗೋವಿಂದ ಎಂ. ಕಾರಜೋಳ ಹೇಳಿದರು.
ವಶಪಡಿಸಿಕೊಂಡಿರುವ ಭೂಮಿಯನ್ನು ರೈಲ್ವೆ ಇಲಾಖೆಗೆ ಡಿಸಿ ಕಚೇರಿಯಲ್ಲಿ ಗುರುವಾರ ಹಸ್ತಾಂತರಿಸಿ ಮಾತನಾಡಿ, ಟೆಂಡರ್ ಪ್ರಕ್ರಿಯೆ ಕೂಡ ಪೂರ್ಣಗೊಂಡಿದೆ ಎಂದರು.
ಭರಮಸಾಗರ- ಚಿತ್ರದುರ್ಗ ಮಾರ್ಗದ ಕಾಮಗಾರಿಗೆ ರೈಲ್ವೇ ಸಚಿವ ವಿ.ಸೋಮಣ್ಣ ಅವರು ಶೀಘ್ರದಲ್ಲೇ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಆದ್ದರಿಂದ ಈ ಕಾರ‌್ಯಕ್ರಮಕ್ಕೆ ಪೂರಕ ಸಿದ್ಧತೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನೇರ ರೈಲ್ವೇ ಯೋಜನೆ, ಚಿತ್ರದುರ್ಗ ಜಿಲ್ಲೆಗೆ ಅತ್ಯಂತ ಅಗತ್ಯವಾಗಿದ್ದು, ಈ ಜಿಲ್ಲಾ ವ್ಯಾಪ್ತಿ 1210 ಎಕರೆ ಪೈಕಿ 1053 ಎಕರೆ ಸ್ವಾಧೀನ ಪಡಿಸಿಕೊಂಡು ರೈಲ್ವೇಗೆ ಕೊಡಲಾಗಿದೆ. ಬಾಕಿ 145 ಎಕರೆ ಭೂಮಿ ಸ್ವಾಧೀನ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಯೋಜನೆಗೆ ವಿಳಂಬವಾಗದಂತೆ ಭೂಮಿಯನ್ನು ತ್ವರಿತವಾಗಿ ಹಸ್ತಾಂತರಿಸಬೇಕು ಎಂದರು.
ಹಿಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಅಧಿಕಾರಾವಧಿಯಲ್ಲಿ, ಆಲಮಟ್ಟಿ-ಕೊಪ್ಪಳ-ಚಿತ್ರದುರ್ಗ ರೈಲು ಮಾರ್ಗ ಯೋಜನೆ ಅನುಷ್ಠಾನ ಕೋರಿ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲಾಗಿತ್ತು. ಶೇ.50:50 ಅನುಪಾತದಲ್ಲಿ ರಾಜ್ಯ ಸರ್ಕಾರದಿಂದ ಅನುದಾನ, ಭೂಮಿ ಕೊಡುವುದಾಗಿ ಪ್ರಸ್ತಾವನೆಯಲ್ಲಿ ತಿಳಿಸಲಾಗಿತ್ತು ಎಂದು ತಿಳಿಸಿದರು.
ಈ ಯೋಜನೆಗೆ ಈಗ ಮರುಜೀವ ಕೊಡಬೇಕಿದ್ದು, ಚಿತ್ರದುರ್ಗ ಜಿಲ್ಲೆಯಿಂದ ಮತ್ತೊಮ್ಮೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಪ್ರಸ್ತಾವನೆ ಸಲ್ಲಿಸುವಂತೆ ಡಿಸಿ ಟಿ.ವೆಂಕಟೇಶ್‌ಗೆ ನಿರ್ದೇಶಿಸಿದರು.
ಭೂಸ್ವಾಧೀನಾಧಿಕಾರಿ ವಿವೇಕ್, ನೈಋತ್ಯ ರೈಲ್ವೇ ಮುಖ್ಯ ಇಂಜಿನಿಯರ್ ಪ್ರದೀಪ್ ಪುರಿ, ಇಇ ರಜತ್, ಎಇಇ ಬಿ.ಪುರುಷೋತ್ತಮ್, ಎಇ ನಿತ್ಯಾನಂದಸ್ವಾಮಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net