

ಚಿತ್ರದುರ್ಗ: ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಅವರು ನೇರ ಮತ್ತು ನಿಷ್ಠುರ ನಡೆಯ ವ್ಯಕ್ತಿತ್ವವುಳ್ಳವರಾಗಿದ್ದರು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಹೇಳಿದರು.
ಜಿಲ್ಲಾಡಳಿತ, ಜಿಪಂ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಡಿಸಿ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂಬಿಗರ ಚೌಡಯ್ಯ ಅವರ ವಚನಗಳಲ್ಲಿ ನಡೆ-ನುಡಿ ವಿಶಿಷ್ಟವಾಗಿರುವುದನ್ನು ಗಮನಿಸಬಹುದು.
ಸಮಾಜದ ಅಂಕು-ಡೊಂಕುಗಳನ್ನು ಇದ್ದ ಹಾಗೆ ಹೇಳುವ ವ್ಯಕ್ತಿತ್ವ ಅವರು ಹೊಂದಿದ್ದರು. 12ನೇ ಶತಮಾನದ ಶರಣರ ವಚನಗಳು ಪ್ರಸ್ತುತ ಸಮಾಜಕ್ಕೆ ದಾರಿದೀಪವಾಗಿವೆ. ಶರಣರ ವಚನಗಳನ್ನು, ತತ್ವಾದರ್ಶಗಳನ್ನು ಅಳವಡಿಸಿಕೊಂಡು ನಮ್ಮಲ್ಲಿರುವ ಕಂದಾಚಾರ, ಮೂಢನಂಬಿಕೆ ಹೋಗಲಾಡಿಸಬೇಕು ಎಂದು ತಿಳಿಸಿದರು.
ಎಡಿಸಿ ಬಿ.ಟಿ. ಕುಮರಸ್ವಾಮಿ ಮಾತನಾಡಿ, ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.
ಹಿರಿಯೂರು ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕ ಡಾ.ಎಸ್. ಮಾರುತಿ ಉಪನ್ಯಾಸ ನೀಡಿ, 12ನೇ ಶತಮಾನದ ಶರಣದಲ್ಲಿ ಅಂಬಿಗರ ಚೌಡಯ್ಯ ಬಹಳ ಮುಖ್ಯರಾಗುತ್ತಾರೆ. ಜಗತ್ತು ಹೇಗಿರಬೇಕು ಎನ್ನುವುದಕ್ಕಿಂತ ಮುಖ್ಯವಾಗಿ ನಾವು ಹೇಗಿರಬೇಕೆಂದು ತಿಳಿಸಿದ್ದಾರೆ ಎಂದರು.
ವಚನಕಾರರು ಸಮಾಜವನ್ನು ದೂಷಿಸಿಲ್ಲ. ನಾವು ಸಮಾಜದ ಭಾಗ, ಹಾಗಾಗಿ ನಾವು ಸರಿಯಾಗಿರಬೇಕೆಂಬುದನ್ನು ಹೇಳಿದ್ದಾರೆ. ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ ಎಂಬ ಬಸವಣ್ಣನವರ ಆಶಯದಂತೆ ನಮ್ಮನ್ನು ನಾವು ತಿದ್ದಿಕೊಳ್ಳುವುದೇ ಜಗತ್ತಿನ ಬಹುದೊಡ್ಡ ಬದಲಾವಣೆಯಾಗಿದೆ. ಚೌಡಯ್ಯನವರ ಆದರ್ಶಗಳು ಸಕಾರಾತ್ಮಕ ಬದುಕಿಗೆ ನೆರವಾಗುತ್ತವೆ ಎಂದರು.
ಜಿಲ್ಲಾ ಗಂಗಾಂಭಿಕಾ ಬೆಸ್ತರ ಸಂಘದ ಅಧ್ಯಕ್ಷ ಎಚ್.ಡಿ. ರಂಗಯ್ಯ ಮಾತನಾಡಿ, ಸಂಘದಿಂದ ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಸ್ಮಾರಕ ಭವನ ಮತ್ತು ವಿದ್ಯಾಸಂಸ್ಥೆ ಸ್ಥಾಪನೆಗೆ ಸರ್ಕಾರದಿಂದ 5 ಎಕರೆ ಜಮೀನು ಮಂಜೂರು ಮಾಡಿಸಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ. ಗುರುನಾಥ, ಜಿಲ್ಲಾ ಗಂಗಾಂಭಿಕಾ ಬೆಸ್ತರ ಸಂಘದ ಕಾರ್ಯದರ್ಶಿ ಪಿ. ಶ್ರೀನಿವಾಸ್, ಉಪಾಧ್ಯಕ್ಷ ಕೃಷ್ಣಮೂರ್ತಿ, ಸಮುದಾಯದ ಮುಖಂಡರಾದ ನಾಗರಾಜ್, ಶಿವಾನಂದ್, ಆರ್. ಪ್ರಕಾಶ್, ಜಯಣ್ಣ, ಮಂಜುನಾಥ್, ಮಹೇಶ್, ಶಶಿಕಿರಣ್, ರವಿಚಂದ್ರ ಹಾಗೂ ಅಧಿಕಾರಿಗಳು ಇದ್ದರು. ಚಳ್ಳಕೆರೆ ತಾಲೂಕು ಮಲ್ಲೂರಹಳ್ಳಿ ರಾಜಣ್ಣ ತಂಡದವರು ಗೀತಗಾಯನ ನಡೆಸಿಕೊಟ್ಟರು.