

ಹಗರಿಬೊಮ್ಮನಹಳ್ಳಿ: ಸರ್ಕಾರಿ ನೌಕಕರೆಂದು ಪರಿಗಣಿಸಲು ಸೇರಿ ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಪಟ್ಟಣದಲ್ಲಿ ಮಂಗಳವಾರ ಪೌರ ಕಾರ್ಮಿಕರು ಕೈಗೆ ಕಪ್ಪು ಬಟ್ಟೆ ಧರಿಸಿ ಕರ್ತವ್ಯ ನಿರ್ವಹಿಸಿದರು. ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಏ.12ರಿಂದ ನಗರ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ವೃಂದದ ನೌಕರರು ಕರ್ತವ್ಯ ನಿರ್ವಹಿಸುವವರು ಕಪ್ಪುಬಟ್ಟೆ ಧರಿಸಿ ಕರ್ತವ್ಯ ಮಾಡುತ್ತಿದ್ದಾರೆ.
ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಅಧ್ಯಕ್ಷ ಕೆ.ಪ್ರಭಾಕರ ಮಾತನಾಡಿ, ನಮ್ಮನ್ನು ಅರೆ ಸರ್ಕಾರಿ ನೌಕರರೆಂದು ಸರ್ಕಾರ ಪರಿಗಣಿಸಿದೆ. ಇದರಿಂದ ನಮಗೆ ಅನ್ಯಾಯವಾಗುತ್ತಿದೆ. ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಹೊರಗುತ್ತಿಗೆಯಡಿ ಕೆಲಸಮಾಡುವ ನೀರು ಸರಬರಾಜು ನೌಕರರು, ವಾಹನಗಳ ಚಾಲಕರು ಹಾಗೂ ರಸ್ತೆಗಳ ಕ್ಲೀನರ್ಸ್ ಸೇರಿ ವಿವಿಧ ವೃಂದದ ನೌಕರರರಿಗೆ ನೇರ ಖಾತೆಗೆ ಮಾಸಿಕ ವೇತನ ಜಮೆ ಮಾಡಬೇಕು ಎಂದು ಒತ್ತಾಯಿಸಿದರು.
ರಾಜ್ಯವ್ಯಾಪಿ 12 ಸಾವಿರಕ್ಕೂ ಹೆಚ್ಚು ನೌಕರರು ಇದ್ದಾರೆ. ಅವರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ 45 ದಿನಗಳ ಗಡುವು ನೀಡಲಾಗಿದೆ. ಸ್ಪಂದಿಸದಿದ್ದರೆ ಮೇ.26 ರಿಂದ ಎಲ್ಲ ನೌಕರರು ಕೆಲಸವನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಕಾಲ ಮುಷ್ಕರ ಮಾಡಲಾಗುವುದು ಎಂದು ಎಚ್ಚರಿಸಿದರು.