ನೇಮಕಾತಿ ಹುದ್ದೆ ಹೆಚ್ಚಳಕ್ಕೆ ಆಗ್ರಹಿಸಿ ಪತ್ರ ಚಳವಳಿ

5
Published on

ಮೈಸೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಹುದ್ದೆಗಳ ಸಂಖ್ಯೆ ಹೆಚ್ಚಳ ಮಾಡಿ ಶೀಘ್ರ ನೇಮಕ ಪ್ರಕ್ರಿಯೆ ಆರಂಭಿಸುವಂತೆ ಡಿ. ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿಯಿಂದ ಸರ್ಕಾರಕ್ಕೆ ಪತ್ರ ಚಳವಳಿ ನಡೆಯುತು.
ನಗರಪಾಲಿಕೆ ಮುಂಭಾಗ ಇರುವ ಅಂಚೆ ಪೆಟ್ಟಿಗೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರಿಗೆ ಪತ್ರಗಳನ್ನು ರವಾನಿಸಿದ ಪ್ರತಿಭಟಕಾರರು, ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಜಾರಿಗೊಂಡಿರುವುದರಿಂದ ಕಾಲೇಜು, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹುದ್ದೆಗಳ ಸಂಖ್ಯೆ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಲಾಯಿತು.
ವಿವಿಧ 29 ವಿಷಯಗಳಿಗೆ ಸಂಬಂಧಿಸಿದಂತೆ 1,242 ಹುದ್ದೆಗಳ ಭರ್ತಿಗೆ ಸರ್ಕಾರ ಮುಂದಾಗಿದೆ. ಆದರೆ ರಾಜ್ಯದಲ್ಲಿರುವ 410ಕ್ಕೂ ಹೆಚ್ಚು ಸರ್ಕಾರಿ ಪದವಿ ಕಾಲೇಜುಗಳಲ್ಲಿ 5 ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. 12 ವರ್ಷಗಳ ಬಳಿಕ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಮುಂದೆ ಆಹ್ವಾನಿಸುವ ವೇಳೆಗೆ ಹಲವರಿಗೆ ವಯೋಮಿತಿಯೇ ಮೀರಿರುತ್ತದೆ. ಆದ್ದರಿಂದ ನೇಮಕಾತಿ ಹುದ್ದೆಗಳ ಸಂಖ್ಯೆ ಹೆಚ್ಚಿಸಿ, ತಕ್ಷಣವೇ ಅರ್ಜಿ ಆಹ್ವಾನಿಸಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಯಿತು.
ಸಮಿತಿ ಗೌರವಾಧ್ಯಕ್ಷ ಎಂ.ಚಂದ್ರಶೇಖರ್, ಅಧ್ಯಕ್ಷ ಜಾಕೀರ್ ಹುಸೇನ್, ಮುಖಂಡರಾದ ದ್ಯಾವಪ್ಪನಾಯಕ, ಪಿ.ರಾಜು, ಎನ್.ಶಿವಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net