ನೇಮಕಾತಿ, ಮುಂಬಡ್ತಿ ತಡೆಗೆ ಆಗ್ರಹ

Protest
Published on

ಚಿತ್ರದುರ್ಗ: ರಾಜ್ಯದಲ್ಲಿ ಒಳ ಮೀಸಲಾತಿ ಜಾರಿಯಾಗುವವರೆಗೂ ಹೊಸ ನೇಮಕಾತಿ, ಮುಂಬಡ್ತಿಗಳನ್ನು ತಡೆಹಿಡಿಯಬೇಕು ಎಂದು ಆಗ್ರಹಿಸಿ ಸಾಮಾಜಿಕ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

ಒಳಮೀಸಲಾತಿ ತ್ವರಿತ ಅನುಷ್ಠಾನ ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ರಾಜ್ಯದ ಸಿಎಂಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.

ಸಚಿವ ಸಂಪುಟದ ಅದೇಶವನ್ನು ಉಲ್ಲಂಘಿಸಿ ತಮ್ಮ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಕ್ರಮ ಕೈಗೊಳ್ಳುತ್ತಿರುವ ಸಚಿವರನ್ನು ಸಂಪುಟದಿಂದ ವಜಾಗೊಳಿಸಬೇಕು. ಇತ್ತೀಚೆಗೆ ಕೆಲ ಸಚಿವರು ಒಳ ಮೀಸಲಾತಿ ವಿರೋಧಿ ಸಭೆಗಳಲ್ಲಿ ಭಾಗವಹಿಸುವುದು ಸಿಎಂಗೂ ತಿಳಿದ ಸಂಗತಿಯಾಗಿದೆ. ಈ ವರ್ತನೆಯು ಸುಪ್ರೀಂ ಕೋರ್ಟ್‌ನ ತೀರ್ಪಿಗೆ, ಸಂಪುಟದ ನಿರ್ಣಯಕ್ಕೆ ವಿರುದ್ಧವಾಗಿದೆ. ಹೀಗಾಗಿ ಅಂತಹ ಸಚಿವರನ್ನು ತಕ್ಷಣವೇ ಸಂಪುಟದಿಂದ ಕೈ ಬಿಡಬೇಕು ಎಂದು ಆಗ್ರಹಿಸಿದರು.

ಕೆಲ ಅಧಿಕಾರಿಗಳು, ಶಾಸಕರು, ನೌಕರರು ಕೂಡ ಒಳ ಮೀಸಲಾತಿ ವಿರೋಧಿ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಅಂತವರ ಮೇಲೂ ಶಿಸ್ತು ಕ್ರಮ ಜರುಗಿಸಬೇಕು. ಒಳ ಮೀಸಲು ಜಾರಿಯಾಗದೆ, ಸರ್ಕಾರ ಎಸ್‌ಸಿಪಿ ಹಣ ಬಿಡುಗಡೆಗೊಳಿಸಿದರೆ, ಅದರಿಂದ ಮಾದಿಗ ಸಮುದಾಯದವರಿಗೆ ದೊಡ್ಡ ಅನ್ಯಾಯವಾಗಲಿದೆ. ಕೂಡಲೇ ಸರ್ಕಾರ ಈ ನಿರ್ಣಯವನ್ನು ಸ್ಥಗಿತಗೊಳಿಸಬೇಕು ಎಂದು ಕೋರಿದರು.

ಸಮಿತಿಯ ಗೌರವ ಅಧ್ಯಕ್ಷ ಡಿ.ದುರುಗೇಶಪ್ಪ, ಅಧ್ಯಕ್ಷ ಕೆ.ಕುಮಾರ್, ಪದಾಧಿಕಾರಿಗಳಾದ ಸಿ.ಎ.ಚಿಕ್ಕಣ್ಣ, ಎಂ.ರಾಮಾಂಜನೇಯ, ಆರ್.ರಾಮಲಿಂಗಪ್ಪ, ಎಂ.ಡಿ.ರವಿ, ಕೆ.ಕೃಷ್ಣಮೂರ್ತಿ, ಡಿ.ಯಲ್ಲಪ್ಪ, ಹೊಳೆಯಪ್ಪ, ಮುಖಂಡರಾದ ಹನುಮಂತಪ್ಪ ದುರ್ಗ, ಪ್ರೊ.ಸಿ.ಕೆ.ಮಹೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net