

ಚಿಕ್ಕಬಳ್ಳಾಪುರ : ನಿಯಮಾನುಸಾರ ನೇಮಕವಾದ ಪಿಯು ಉಪನ್ಯಾಸಕರಿಗೆ ಕೌನ್ಸೆಲಿಂಗ್ ನಡೆಸಿ, ಸ್ಥಳ ನಿಯುಕ್ತಿಯ ಆದೇಶ ಪತ್ರ ನೀಡಬೇಕು. ಇಲ್ಲವೇ ದಯಾಮರಣಕ್ಕೆ ಅನುಮತಿ ಕೊಡಿ ಎಂದು ಪಿಯು ಉಪನ್ಯಾಸಕ ಅಭ್ಯರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
ಜಿಲ್ಲಾಧಿಕಾರಿ ಆರ್.ಲತಾ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬುಧವಾರ ಮನವಿ ಸಲ್ಲಿಸಿದ ಪಿಯು ಉಪನ್ಯಾಸಕ ಅಭ್ಯರ್ಥಿಗಳು, ಬೇಡಿಕೆ ತ್ವರಿತ ಈಡೇರಿಕೆಗೆ ಒತ್ತಾಯಿಸಿದರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇದ್ದ 1069 ಹುದ್ದೆಗಳಿಗೆ 2015ನೇ ಸಾಲಿನ ಮೇ ನಲ್ಲಿ ನೇಮಕಾತಿ ಅಧಿಸೂಚನೆ ಹೊರಡಿಸಿ, ನಂತರ ಕಾರಣಾಂತರಗಳಿಂದ ಪ್ರಕ್ರಿಯೆ ತಾತ್ಕಲಿಕವಾಗಿ ಸ್ಥಗಿತಗೊಳಿಸಲಾಯಿತು. 2017ನೇ ಸಾಲಿನ ೆಬ್ರವರಿಯಲ್ಲಿ ತಿದ್ದುಪಡಿ ಅಧಿಸೂಚನೆ ಹೊರಡಿಸಿ 1203 ಹುದ್ದೆಗಳಿಗೆ 2018ರಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಮಾಡಿ, 2019ನೇ ಸಾಲಿನ ಆಗಸ್ಟ್‌ನಲ್ಲಿ ತಾತ್ಕಾಲಿಕ ಮತ್ತು ಅಕ್ಟೋಬರ್‌ನಲ್ಲಿ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿತು. ಇದರಲ್ಲಿ ಜಿಲ್ಲೆಯಲ್ಲಿ 26 ಮಂದಿ ಇದ್ದಾರೆ. ಆದರೆ, ಬಹುತೇಕ ದಾಖಲೆಗಳ ಪರಿಶೀಲನಾ ಪ್ರಕ್ರಿಯೆ ಮುಗಿದಿದ್ದರೂ ಕಾನ್ಸೆಲಿಂಗ್ ನಡೆಸಿಲ್ಲ, ಸ್ಥಳ ನಿಯುಕ್ತಿಯ ಆದೇಶ ಪತ್ರವನ್ನು ನೀಡಿಲ್ಲ ಎಂದು ಉಪನ್ಯಾಸಕ ಅಭ್ಯರ್ಥಿ ಗಂಗಾಧರ್ ಬಾಬು ಆರೋಪಿಸಿದರು.
ಈಗಾಗಲೇ ವಯೋಮಿತಿ ಹೆಚ್ಚಳ ಮತ್ತು ಆರ್ಥಿಕ ಸಂಕಷ್ಟದ ಆತಂಕ ಕಾಡುತ್ತಿದೆ. ಕೂಡಲೇ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಅಭ್ಯರ್ಥಿಗಳಿಗೆ ದಯಾಮರಣಕ್ಕೆ ಅನುಮತಿ ನೀಡಬೇಕೆಂದು ಒತ್ತಾಯಿಸಿದರು.
ಅಂತಿಮ ಆಯ್ಕೆ ಪಟ್ಟಿಯಲ್ಲಿದ್ದ ಪಿಯು ಉಪನ್ಯಾಸಕ ಅಭ್ಯರ್ಥಿಗಳಾದ ನಯಾಜ್ ಅಹ್ಮದ್, ವೇಣು, ಶ್ರೀನಾಥ್, ರೇಣುಕಮ್ಮ, ರೇಷ್ಮಾ, ಬಾಬಾಜಾನ್, ಮುರಳಿ, ಕುಶಲಾ, ರಾಜಪ್ಪ, ಚಿರಂಜೀವಿ, ಹರೀಶ್ ಇತರರಿದ್ದರು.