ನೇಪಾಳ, ರಾಜಸ್ಥಾನಕ್ಕೆ ತೆರಳುತ್ತಿದ್ದ ಬಸ್ ಜಪ್ತಿ, ಸಾರಿಗೆ ಇಲಾಖೆ ಅಪರ ಆಯುಕ್ತ ಎನ್. ನರೇಂದ್ರ ಹೋಳ್ಕರ್ ನೇತೃತ್ವದಲ್ಲಿ ಕಾರ್ಯಾಚರಣೆ

25 Nela Ph 03 RTO Officers Karyacharane
Published on

ನೆಲಮಂಗಲ: ಲಾಕ್‌ಡೌನ್ ನಿಯಮ ಉಲ್ಲಂಸಿ ನೇಪಾಳ ಮತ್ತು ರಾಜಸ್ಥಾನಕ್ಕೆ ಸಂಚರಿಸುತ್ತಿದ್ದ 2 ಖಾಸಗಿ ಬಸ್‌ಗಳನ್ನು ಸಾರಿಗೆ ಇಲಾಖೆ ಅಪರ ಆಯುಕ್ತ ಎನ್. ನರೇಂದ್ರ ಹೊಳ್ಕರ್ ನೇತೃತ್ವದ ಅಧಿಕಾರಿಗಳ ತಂಡ ವಶಪಡಿಸಿಕೊಂಡಿದೆ.

ಬೆಂಗಳೂರು ತುಮಕೂರು ರಾ.ಹೆದ್ದಾರಿ 48ರ ಜಾಸ್ ಟೋಲ್ ಬಳಿ ಮಂಗಳವಾರ ಬೆಂಗಳೂರಿನಿಂದ ರಾಜಸ್ಥಾನಕ್ಕೆ ಸಂಚರಿಸುತ್ತಿದ್ದ ಖಾಸಗಿ ಟ್ರಾವೆಲ್ಸ್‌ನ ಬಸ್‌ನಲ್ಲಿ 10 ಮಂದಿ ಪ್ರಯಾಣಿಸುತ್ತಿದ್ದರು. ಹಾಗೆಯೇ ಮತ್ತೊಂದು ಬಸ್ ಬೆಂಗಳೂರಿನಿಂದ ನೇಪಾಳಕ್ಕೆ 60 ಪ್ರಯಾಣಿಕರೊಂದಿಗೆ ತೆರಳುತ್ತಿದ್ದ ಖಚಿತ ಮಾಹಿತಿ ಆಧರಿಸಿ ಸಾರಿಗೆ ಕಾರ‌್ಯಾಚರಣೆ ಕೈಗೊಳ್ಳಲಾಗಿತ್ತು.

ಪ್ರಯಾಣಿಕರ ಸಹಿತ 2 ಬಸ್‌ಗಳು, ಇಬ್ಬರು ಚಾಲಕರನ್ನು ವಶಪಡಿಸಿಕೊಂಡಿದ್ದ ತಂಡ ಬಳಿಕ ಪ್ರಯಾಣಿಕರನ್ನು ವಾಪಸು ಕಳುಹಿಸಿತು.

ಈ ಬಗ್ಗೆ ಮಾಹಿತಿ ನೀಡಿದ ಸಾರಿಗೆ ಇಲಾಖೆ ಅಪರ ಆಯುಕ್ತ ಎನ್. ನರೇಂದ್ರ ಹೋಳ್ಕರ್, ಬೆಂಗಳೂರಿನಿಂದ ನೇಪಾಳ ಮತ್ತು ರಾಜಸ್ಥಾನಕ್ಕೆ ತೆರಳುತ್ತಿರುವ ಬಗ್ಗೆ ಕೆಲ ಸ್ಥಳೀಯರು ಮಾಹಿತಿ ನೀಡಿದ್ದರು. ತಮಿಳುನಾಡಿನ ನಕಲಿ ಪಾಸ್ ಬಳಸಿಕೊಂಡು 60 ಜನ ನೇಪಾಳಕ್ಕೆ ಮತ್ತು 10 ಜನ ರಾಜಸ್ಥಾನಕ್ಕೆ ತೆರಳುತ್ತಿದ್ದರು. ಪ್ರತಿಯೊಬ್ಬರಿಂದಲೂ 7 ಸಾವಿರ ರೂ.ಗೂ ಹೆಚ್ಚಿನ ಶುಲ್ಕ ಪಡೆಯಲಾಗಿದೆ.

ಕೋವಿಡ್ ನಿಯಮ ಉಲ್ಲಂಸಿರುವ ಆರೋಪದಲ್ಲಿ ಬಸ್‌ಗಳನ್ನು ಜಪ್ತಿ ಮಾಡಲಾಗಿದ್ದು, ನ್ಯಾಯಾಲಯಕ್ಕೆ ಒಪ್ಪಿಸಲಾಗುವುದು ಎಂದರು.

ರಾಮನಗರ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಚ್.ರಾಜಣ್ಣ, ತುಮಕೂರು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಜು, ನೆಲಮಂಗಲ ಹಿರಿಯ ಮೋಟಾರ್ ವಾಹನ ನಿರೀಕ್ಷಕ ಜಿ.ವಿ.ಸುಧೀರ್, ಕಿರಿಯ ಮೋಟಾರ್ ವಾಹನ ನಿರೀಕ್ಷಕಿ ಚೇತನಾ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net