

ಚಿತ್ರದುರ್ಗ: ಮರಣದ ನಂತರ ನೇತ್ರದಾನ ಮಾಡುವುದರಿಂದ ಅಂಧರ ಬಾಳಿಗೆ ಬೆಳಕಾಗಬಹುದು. ಈ ಕುರಿತು ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದು ಹಿರಿಯ ನೇತ್ರ ತಜ್ಞ ಡಾ.ಪ್ರಭುದೇವ್ ಸಲಹೆ ನೀಡಿದರು.
ಎಸ್‌ಆರ್‌ಬಿಎಂಎಸ್ ರೋಟರಿ ಬಾಲಭವನದಲ್ಲಿ ಶನಿವಾರ ರಾತ್ರಿ ಬಸವೇಶ್ವರ ಪುನರ್ ಜ್ಯೋತಿ ಐ ಬ್ಯಾಂಕ್‌ನಿಂದ ಸೆ. 8ರವರೆಗೆ ಆಯೋಜಿಸಿರುವ 38ನೇ ರಾಷ್ಟ್ರೀಯ ನೇತ್ರದಾನ ಪ್ರಾಕ್ಷಿಕ ಉದ್ಘಾಟಿಸಿ ಮಾತನಾಡಿದರು.
ಮಾನವನಿಗೆ ಕಣ್ಣು ಅತಿ ಮುಖ್ಯವಾದ ಅಂಗ. ಅದನ್ನು ಅತ್ಯಂತ ಜೋಪಾನವಾಗಿ ಕಾಪಾಡಿಕೊಳ್ಳಬೇಕು. ತೊಂದರೆ ಕಂಡುಬಂದಲ್ಲಿ ತಕ್ಷಣ ವೈದ್ಯರಿಂದ ಚಿಕಿತ್ಸೆ ಪಡೆದು ಆರಂಭದಲ್ಲೇ ನಿವಾರಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಐ ಬ್ಯಾಂಕ್‌ನ ಅಧ್ಯಕ್ಷ ಶಿವರಾಂ ಮಾತನಾಡಿ, ಐ ಬ್ಯಾಂಕ್ ಮೂಲಕ ಈವರೆಗೂ 1,650 ಕಣ್ಣುಗಳನ್ನು ಸಂಗ್ರಹಿಸಿ ಶಸ್ತ್ರಚಿಕಿತ್ಸೆ ಮೂಲಕ ಅಂಧರಿಗೆ ದೃಷ್ಟಿ ನೀಡಲಾಗಿದೆ. ದೇಶದಲ್ಲಿ 1.20 ಕೋಟಿ ಅಂಧರಿದ್ದು, ಎಲ್ಲರೂ ಕೈಜೋಡಿಸಿದರೆ ಅವರೆಲ್ಲರ ಬಾಳು ಬೆಳಕಾಗಬಹುದು ಎಂದರು.
ಐ ಬ್ಯಾಂಕ್‌ನ ಗಾಯತ್ರಿ ಶಿವರಾಂ, ರೋಟರಿ ಕ್ಲಬ್ ಅಧ್ಯಕ್ಷ ಕನಕರಾಜು, ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್‌ನ ಅಧ್ಯಕ್ಷ ಗಿರೀಶ್, ಚಿನ್ಮೂಲಾದ್ರಿ ಕ್ಲಬ್‌ನ ಅಧ್ಯಕ್ಷ ಶಂಕರಪ್ಪ ಇತರರಿದ್ದರು.