

ಬೆಳಗಾವಿ: ಜಿಲ್ಲೆಯಲ್ಲಿ ಅಂಧತ್ವ ನಿಯಂತ್ರಣದಲ್ಲಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯು ಪ್ರಮುಖ ಪಾತ್ರ ವಹಿಸುತ್ತಿದ್ದು, ರಾಷ್ಟ್ರೀಯ ಅಂಧತ್ವ ನಿವಾರಣಾ ಕಾರ್ಯಕ್ರಮದಡಿ ಅನೇಕ ಕಾರ್ಯಗಳನ್ನು ಉಚಿತವಾಗಿ ಮಾಡುತ್ತಿದೆ. ಅಲ್ಲದೇ ಕಾರ್ನಿಯಾ ಕಸಿ ಮಾಡುವ ಮೂಲಕ ನೇತ್ರದಾನದಲ್ಲಿ ತೊಡಗಿಕೊಂಡಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ ಕೋಣೆ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಸೋಮವಾರ ಕಾಹೆರ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ನೇತ್ರ ವಿಭಾಗ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಮುಂದುವರೆದ ವೈದ್ಯಕೀಯ ಶಿಕ್ಷಣ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮರಣದ ಬಳಿಕ, ನೇತ್ರದಾನ ಮಾಡುವುದರಿಂದ ಇನ್ನೊಬ್ಬರ ಬದುಕಿ ಬೆಳಕು ನೀಡಿದಂತಾಗುತ್ತದೆ. ಹಾಗಾಗಿ ನೇತ್ರದಾನದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಯಬೇಕು. ಅದರಲ್ಲಿಯೂ ವೈದ್ಯಕೀಯ ಮಹಾವಿದ್ಯಾಲಯಗಳು, ಸಂಘ ಸಂಸ್ಥೆಗಳ ಪಾತ್ರ ಬಹುಮುಖ್ಯವಾಗಿರುತ್ತದೆ ಎಂದರು.
ಕಾಹೆರ್ ಕುಲಪತಿ ಡಾ. ನಿತಿನ ಗಂಗಾನೆ ಅವರು, ಮಾತನಾಡಿ, ಅಂಧತ್ವವು ಮಾನವನ ಸರ್ವಾಂಗೀಣ ಅಭಿವೃದ್ದಿಗೆ ಹಾಗೂ ದಿನನಿತ್ಯದ ಚಟುವಟಿಕೆಗಳಿಗೆ ತೊಂದರೆಯನ್ನುಂಟು ಮಾಡುತ್ತದೆ. ನೇತ್ರದಾನ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನೇತ್ರದ ರಕ್ಷಣೆ ಕುರಿತು ಜಾಗೃತಿ ಮೂಡಿಸಿ ಎಂದು ಸಲಹೆ ನೀಡಿದರು. ಜೆಎನ್‌ಎಂಸಿಯ ಉಪಪ್ರಾಚಾರ್ಯ ಡಾ.ರಾಜೇಶ ಪವಾರ ಮಾತನಾಡಿದರು. ನೇತ್ರ ವಿಭಾಗದ ಮುಖ್ಯಸ್ಥ ಡಾ. ಶಿವಾನಂದ ಬುಬನಾಳೆ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಡಾ.ಅರವಿಂದ ತೆನಗಿ, ಡಾ.ಎಸ್ ಬಿ ಪಾಟೀಲ, ಡಾ.ಭಾಗ್ಯಜ್ಯೋತಿ ಬಿ.ಕೆ, ಡಾ.ಚೇತನಾ ಡಾ.ಶರ್ವಾಣಿ, ಡಾ.ಫರ್ಹೀನ್.ಎಂ., ಡಾ.ರೋಹಿಣಿ, ಡಾ. ವಿವೇಕ್ ವಾಣಿ, ಡಾ. ದೀಪಶ್ರೀ ಎಂ. ಮತ್ತಿತರರು ಇದ್ದರು. ಡಾ.ಸ್ಮಿತಾ ಕೆ ಎಸ್ ವಂದಿಸಿದರು. ಈ ಕಾರ್ಯಗಾರದಲ್ಲಿ 110ಕ್ಕೂ ಅಧಿಕ ದೇಶದ ವಿವಿಧ ವಿಭಾಗಗಳ ಪ್ರತಿನಿಧಿಗಳು ಭಾಗವಹಿಸಿದ್ದರು.