ನೇತ್ರದಾನದ ಅರಿವು ಮೂಡಿಸಬೇಕು

13 vikram 1
Published on

ಧಾರವಾಡ: ಇಲ್ಲಿನ ಜುಬಿಲಿ ವೃತ್ತದ ಬಳಿ ನೂತನವಾಗಿ ಸಜ್ಜುಗೊಳಿಸಿರುವ ಡಾ. ಅಗರ್​ವಾಲ್ಸ್ ಕಣ್ಣಿನ ಆಸ್ಪತ್ರೆಯನ್ನು ಮಂಗಳವಾರ ಉದ್ಘಾಟಿಸಲಾಯಿತು.

ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿ, ಮನುಷ್ಯನ ದೇಹದಲ್ಲಿನ ಎಲ್ಲ ಅವಯವಗಳೂ ಮುಖ್ಯ. ಅವುಗಳಿಗೆ ಹಾನಿಯಾದಾಗ ಮಾತ್ರ ಅದರ ಮಹತ್ವ ತಿಳಿಯುತ್ತದೆ. ವಿಶೇಷವಾಗಿ, ಕಣ್ಣಿಲ್ಲದೆ ಜೀವನ ನಡೆಸುವುದು ಅಸಾಧ್ಯ. ಹೀಗಾಗಿ ಕಣ್ಣಿನ ಬಗ್ಗೆ ಕಾಳಜಿ ವಹಿಸಬೇಕು. ಅನೇಕರು ಕಣ್ಣಿಲ್ಲದೆ ಜೀವನ ನಡೆಸುತ್ತಿದ್ದಾರೆ. ಅವರ ಬಾಳಿನಲ್ಲಿ ಬೆಳಕು ಮೂಡಿಸಲು ನೇತ್ರದಾನ ಕುರಿತು ಜಾಗೃತಿ ಮೂಡಿಸಬೇಕಲ್ಲದೆ, ತಿಳಿವಳಿಕೆ ಇದ್ದವರು ಸ್ವಯಂ ನೇತ್ರದಾನಕ್ಕೆ ಮುಂದಾಗಬೇಕು ಎಂದರು.

ನಮ್ಮ ಜೀವನ ಶೈಲಿ ಹಾಗೂ ಆಹಾರ ಪದ್ಧತಿ ಗಮನಿಸಿದರೆ ಕಣ್ಣು ಹಾಳಾಗುವ ಸಾಧ್ಯತೆ ಹೆಚ್ಚು. ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವುದು ಅನಿವಾರ್ಯ. ಆದರೆ, ಇದರಿಂದ ಕಣ್ಣಿನ ಮೇಲಾಗುವ ಪರಿಣಾಮ ಹಾಗೂ ಮಾನಸಿಕ ಒತ್ತಡದ ಕಡೆಗೂ ಗಮನಿಸಬೇಕು. ಡಿಜಿಟಲ್ ಉಪಕರಣಗಳ ಬಳಕೆ ಕುರಿತು ಸರಿಯಾದ ಮಾಹಿತಿ ಪಡೆದುಕೊಳ್ಳಬೇಕು. ಕಣ್ಣಿಗೆ ಸಮಸ್ಯೆ ಆಗದಿದ್ದರೂ ವರ್ಷಕ್ಕೆ ಎರಡು ಬಾರಿಯಾದರೂ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ ಎಂದರು.

ಉತ್ತರ ಕರ್ನಾಟಕ ಭಾಗಕ್ಕೆ ಹು-ಧಾ ಅವಳಿ ನಗರ ಮೆಡಿಕಲ್ ಹಬ್ ಆಗಿ ಪರಿವರ್ತನೆಯಾಗಿದೆ. ಈ ಭಾಗದ ವೈದ್ಯರು ಉತ್ತಮ ಸೇವೆ ನೀಡುವ ಉದ್ದೇಶ ಹೊಂದಿದ್ದಾರೆ. ಹಲವು ದೇಶ, ರಾಷ್ಟ್ರಗಳಲ್ಲಿ 100ಕ್ಕೂ ಹೆಚ್ಚು ಅಗರ್​ವಾಲ್ ಆಸ್ಪತ್ರೆಗಳನ್ನು ಸ್ಥಾಪಿಸಲಾಗಿದೆ. ಈ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆ ನೀಡುವಂತಾಗಲಿ ಎಂದು ಹಾರೈಸಿದರು.

ಡಾ. ಅಗರ್​ವಾಲ್ಸ್ ಕಣ್ಣಿನ ಆಸ್ಪತ್ರೆ ಸಮೂಹ ಸಂಸ್ಥೆ ಕಾರ್ಯಾಚರಣೆ ಅಧ್ಯಕ್ಷ ಹರೀಶ ತ್ರಿವೇದಿ ಮಾತನಾಡಿ, ಧಾರವಾಡದಲ್ಲಿ ಪ್ರಾರಂಭಿಸಿರುವುದು ರಾಜ್ಯದ 15ನೇ ಶಾಖೆ. ಸುಧಾರಿತ ಕಾರ್ಯವಿಧಾನಗಳೊಂದಿಗೆ ನೇತ್ರ ವಿಜ್ಞಾನ ಕ್ಷೇತ್ರದಲ್ಲಿ ನಾವೀನ್ಯತೆ ತರುವಲ್ಲಿ ಮುಂಚೂಣಿಯಲ್ಲಿದ್ದೇವೆ. ಈ ಆಸ್ಪತ್ರೆಯಲ್ಲಿ ಗುಣಮಟ್ಟದ ಸೇವೆಗಳು ಲಭ್ಯವಿವೆ ಎಂದರು.

ಆಸ್ಪತ್ರೆ ಜಂಟಿ ವೈದ್ಯಕೀಯ ನಿರ್ದೇಶಕ ಡಾ. ಶ್ರೀಕೃಷ್ಣ ನಾಡಗೌಡ ಮಾತನಾಡಿ, 2016ರಲ್ಲಿ ಹುಬ್ಬಳ್ಳಿಯಲ್ಲಿ ಆಸ್ಪತ್ರೆ ಆರಂಭಿಸಿದ್ದು, ಈವರೆಗೆ ಸುಮಾರು 50 ಸಾವಿರ ರೋಗಿಗಳಿಗೆ ತಪಾಸಣೆ ನಡೆಸಿ 10 ಸಾವಿರ ಜನರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇವುಗಳ ಜತೆಗೆ ಸಮಾಜ ಸೇವೆಯಲ್ಲೂ ತೊಡಗಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಸೇವೆ ನೀಡಲು ಪ್ರಯತ್ನಿಸಲಾಗುವುದು ಎಂದರು. ಆಸ್ಪತ್ರೆ ಜಂಟಿ ವೈದ್ಯಕೀಯ ನಿರ್ದೇಶಕ ಡಾ. ರವಿ ನಾಡಿಗೇರ ಮಾತನಾಡಿ, ಧಾರವಾಡದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಲು ವಿನೂತನ ತಂತ್ರಜ್ಞಾನಗಳನ್ನು ಬಳಸಲಾಗುತ್ತಿದೆ. ಪ್ರಾರಂಭದಲ್ಲಿ 4 ತಿಂಗಳಷ್ಟು ಕಾಲ ಹಿರಿಯ ನಾಗರಿಕರಿಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದರು. ಡಾ. ಶರಯು ತಾವರಗೇರಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಕಣ್ಣಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೊರ ತರಲಾಗಿರುವ ಕಿರು ಹೊತ್ತಗೆಯನ್ನು ಬಿಡುಗಡೆ ಮಾಡಲಾಯಿತು. ಡಾ. ಅಗರ್​ವಾಲ್ಸ್ ಕಣ್ಣಿನ ಆಸ್ಪತ್ರೆ ಸಮೂಹ ಸಂಸ್ಥೆಯ ಸಿಇಒ ಡಾ. ಆದಿಲ್ ಅಗರ್​ವಾಲ್, ಪೊಲೀಸ್ ಆಯುಕ್ತ ಆರ್. ದಿಲೀಪ, ಆಸ್ಪತ್ರೆ ಸಿಬ್ಬಂದಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net