ನೇತ್ರದಾನಕ್ಕೆ ಮಹತ್ವ ನೀಡಿ

6 vikram 8
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಮರಣದ ನಂತರ ಕಣ್ಣು ದಾನ ಮಾಡುವ ಮೂಲಕ ಮತ್ತೊಬ್ಬರ ಬಾಳಿಗೆ ಬೆಳಕಾಗಬಹುದು. ಹೀಗಾಗಿ ಮರಣದ ಬಳಿಕ ಪ್ರತಿಯೊಬ್ಬರು ನೇತ್ರದಾನಕ್ಕೆ ಮುಂದಾಗಬೇಕು ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ರಾಷ್ಟ್ರೀಯ ನೇತ್ರದಾನ ಪಾಕ್ಷಿಕದ ನಿಮಿತ್ತ ‘ಇದ್ದಾಗ ರಕ್ತದಾನ, ಮರಣದ ಬಳಿಕ ನೇತ್ರದಾನ’ ಘೋಷ ವಾಕ್ಯದಡಿ ಸಕ್ಷಮ ಧಾರವಾಡ ಜಿಲ್ಲಾ ಘಟಕ, ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಭಾನುವಾರ ನಗರದಲ್ಲಿ ಏರ್ಪಡಿಸಿದ್ದ ಅಂಧರ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಲವರಿಗೆ ಕಣ್ಣಿನ ಮಹತ್ವ ಹಾಗೂ ನೇತ್ರದಾನದ ಅರಿವೇ ಇಲ್ಲ. ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ದಿನಾಚರಣೆ ನಿಮಿತ್ತ ಸಕ್ಷಮ ಕೈಗೊಂಡ ನೇತ್ರದಾನ ಜಾಗೃತಿ ಕಾರ್ಯ ಶ್ಲಾಘನೀಯ. ನೇತ್ರದಾನ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು. ಪ್ರತಿಯೊಬ್ಬರು ನೇತ್ರದಾನಕ್ಕೆ ಮುಂದಾಗುವ ಮೂಲಕ ಕತ್ತಲೆಯಲ್ಲಿರುವ ಅಂಧರ ಬಾಳು ಬೆಳಗುವ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಮನಗುಂಡಿ ಗುರುಬಸವ ಮಹಾಮನೆಯ ಶ್ರೀ ಬಸವಾನಂದ ಸ್ವಾಮೀಜಿ ಮಾತನಾಡಿ, ನನಗೆ ನೇತ್ರದಾನ ಮಾಡುವ ಭಾಗ್ಯ ಇಲ್ಲ. ಹೀಗಾಗಿ 96 ಸಲ ರಕ್ತದಾನ ಮಾಡಿರುವೆ. ಕಣ್ಣಿರುವ ಭಾಗ್ಯವಂತರು, ನೇತ್ರದಾನ ಮಾಡಬೇಕು ಎಂದು ಸಲಹೆ ನೀಡಿದರು.
ಸಕ್ಷಮ ಕರ್ನಾಟಕ ಉತ್ತರ ಪ್ರಾಂತದ ಅಧ್ಯಕ್ಷ ಎಸ್.ಬಿ.ಶೆಟ್ಟಿ ಮಾತನಾಡಿದರು. ಕೆಸಿಸಿ ಬ್ಯಾಂಕ್ ವೃತ್ತದಿಂದ ಆರಭವಾದ ಜಾಥಾ ಸುಭಾಷ ರಸ್ತೆ, ಸ್ವಾಮಿ ವಿವೇಕಾನಂದ ವೃತ್ತ, ಆಝಾದ ಪಾರ್ಕ್, ಮಾರ್ಗವಾಗಿ ಕಲಾಭವನದಲ್ಲಿ ಸಂಪನ್ನಗೊಂಡಿತು. ರೋಟರಿ ಕ್ಲಬ್, ಫ್ಯಾರಾ ಮೆಡಿಕಲ್ ಕಾಲೇಜು, ಕ್ಯಾನ್ಸರ್ ಆಸ್ಪತ್ರೆ, ಲಯನ್ಸ್ ಕ್ಲಬ್ ಹಾಗೂ ವಿವಿಧ ಸಂಸ್ಥೆಗಳು ಪಾಲ್ಗೊಂಡಿದ್ದವು.
ಸಕ್ಷಮ ಕರ್ನಾಟಕ ಉತ್ತರ ಪ್ರಾಂತ ಉಪಾಧ್ಯಕ್ಷ ಡಾ.ಸುನೀಲ ಗೋಖಲೆ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ ಕೆಂಪಲಿಂಗಣ್ಣವರ, ಸಕ್ಷಮ ಕರ್ನಾಟಕ ಉತ್ತರ ಪ್ರಾಂತ ಧಾರವಾಡ ಜಿಲ್ಲಾಧ್ಯಕ್ಷ ಡಾ. ಕೆ.ವಿ.ಅಚ್ಯುತ, ಉಪಾಧ್ಯಕ್ಷ ಡಾ. ವಿಜಯ ವಿಠ್ಠಲ ಮನಗೂಳಿ, ಸಂಚಾಲಕ ಕೇಶವ ತೆಲಗು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net