ನೇತ್ರದಾನ ಮೂಲಕ ಮತ್ತೊಬ್ಬರ ಬಾಳಿಗೆ ಬೆಳಕಾಗಿ

Published on

ಗುಂಡ್ಲುಪೇಟೆ: ಕಣ್ಣು ಎಲ್ಲರಿಗೂ ಪ್ರಮುಖವಾದ ಅಂಗವಾಗಿದ್ದು, ಮರಣ ನಂತರ ನೇತ್ರದಾನ ಮಾಡುವ ಮೂಲಕ ಮತ್ತೊಬ್ಬರಿಗೆ ದೃಷ್ಟಿ ನೀಡುವಂತಾಗಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ವಸಂತಕುಮಾರಿ ಹೇಳಿದರು.

ಶನಿವಾರ ಪಟ್ಟಣದ ಸ್ಮಾರ್ಟ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಕೊಯಮತ್ತೂರು ಅರವಿಂದ ಕಣ್ಣಾಸ್ಪತ್ರೆ ವತಿಯಿಂದ ಆಯೋಜಿಸಿದ್ದ ಉಚಿತ ಕಣ್ಣಿನ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆಯಿಂದ ಅತಿ ಹೆಚ್ಚು ಜನರು ಕಣ್ಣಿನ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಅಲ್ಲದೇ ಗ್ರಾಮೀಣ ಪ್ರದೇಶದ ಜನರಿಗೆ ಕಣ್ಣಿನ ಸಮಸ್ಯೆ ಇದ್ದರೂ ಆಸ್ಪತ್ರೆಗೆ ಹೋಗಲು ಸಾಧ್ಯವಾಗದೆ ದೃಷ್ಟಿ ಕಳೆದುಕೊಳ್ಳುವ ಅಪಾಯಕ್ಕೆ ಸಿಲುಕಿ ಮತ್ತೊಬ್ಬರ ಆಶ್ರಯದಲ್ಲಿ ಬದುಕುವಂತಾಗುತ್ತಿದೆ. ಆದ್ದರಿಂದ ಸ್ವಯಂಸೇವಾ ಸಂಸ್ಥೆಗಳು ಆಯೋಜಿಸುವ ಇಂಥಾ ಶಿಬಿರಗಳ ಸದುಪಯೋಗ ಪಡೆದುಕೊಳ್ಳುವ ಜತೆಗೆ ನೇತ್ರದಾನ ಮಾಡುವ ಮೂಲಕ ಮರಣ ನಂತರ ಮತ್ತೊಬ್ಬರ ಬಾಳಿಗೆ ಬೆಳಕಾಗಬೇಕು ಎಂದು ಹೇಳಿದರು.

ಶಿಬಿರದ ಆಯೋಜಕ ಅನೂಪ್ ಸಿಂಗ್ ಮಾತನಾಡಿ, ಸಮಾಜದ ಕಟ್ಟಕಡೆಯ ಜನರಿಗೂ ಅನುಕೂಲ ಆಗುವಂತೆ ಸ್ವಯಂಸೇವಾ ಸಂಸ್ಥೆಗಳು ಈ ಶಿಬಿರ ಆಯೋಜಿಸಿ ತೊಂದರೆಯಲ್ಲಿರುವ ಜನತೆಗೆ ನೆರವಾಗುತ್ತಿದ್ದಾರೆ. ಎಲ್ಲರೂ ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು. ಶಿಬಿರದಲ್ಲಿ 100 ಹೊರ ರೋಗಿಗಳ ತಪಾಸಣೆ ನಡೆಸಿ ಶಸ್ತ್ರ ಚಿಕಿತ್ಸೆ ಅಗತ್ಯವಾದ 24 ರೋಗಿಗಳನ್ನು ಕೊಯಮತ್ತೂರಿಗೆ ಕರೆದೊಯ್ಯಲಾಯಿತು. ಲಯನ್ಸ್ ಸಂಸ್ಥೆಯ ಎಂ.ಸಿ.ಶಿವಪ್ರಸಾದ್, ಶಂಕರನಾರಾಯಣ ಜೋಯಿಸ್, ರಾಘವೇಂದ್ರ, ಅನುಗ್ರಹ ಸಂಸ್ಥೆಯ ಕೆ.ರಮೇಶ್, ಅರವಿಂದ ಕಣ್ಣಾಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ವಿಜಯಕಾಂತ್, ಸ್ವಯಂಸೇವಕರಾದ ಪುಟ್ಟಮ್ಮ, ಮುದ್ದಮ್ಮ, ಮಹೇಶ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net