ಚಾಮರಾಜನಗರ: ನೇತ್ರದಾನವು ಶ್ರೇಷ್ಠವಾಗಿದ್ದು ನೇತ್ರದಾನ ಮಾಡುವ ಮೂಲಕ ಅಂಧರ ಬಾಳಿಗೆ ಬೆಳಕಾಗುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್. ಚಿದಂಬರ ತಿಳಿಸಿದರು.
ನಗರದ ಹೊರವಲಯದಲ್ಲಿರುವ ವೈದ್ಯಕೀಯ ವಿಜ್ಞಾನ (ಸಿಮ್ಸ್) ಸಂಸ್ಥೆಯಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 40ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿವರ್ಷ ಆರೋಗ್ಯ ಇಲಾಖೆ ವತಿಯಿಂದ ಆ.25 ರಿಂದ ಸೆ.8 ರವರೆಗೆ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ದಿನವನ್ನು ಆಚರಿಸಲಾಗುತ್ತದೆ. ಪಾಕ್ಷಿಕ ಕಾರ್ಯಕ್ರಮದಲ್ಲಿ ಜಿಲ್ಲೆಯಾದ್ಯಂತ ನೇತ್ರದಾನದ ಮಹತ್ವದ ಬಗ್ಗೆ ವ್ಯಾಪಕ ಅರಿವು ಮೂಡಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಕಣ್ಣಿನ ಸಮಸ್ಯೆ ಕಾಡುತ್ತಿದೆ. ವ್ಯಕ್ತಿ ಮರಣ ನಂತರ ಕಣ್ಣನ್ನು ಇನ್ನೊಬ್ಬರಿಗೆ ದಾನ ಮಾಡುವ ಮೂಲಕ ಸಾರ್ಥಕತೆಯನ್ನು ಮೆರೆಯಬೇಕು. ಎಂದರು.
ಸಿಮ್ಸ್ ಡೀನ್ ಮತ್ತು ನಿರ್ದೇಶಕ ಡಾ.ಮಂಜುನಾಥ್ ಮಾತನಾಡಿ, ನೇತ್ರದಾನ ಕುಟುಂಬದ ಸಂಪ್ರದಾಯವಾಗಬೇಕು. ಪ್ರತಿಯೊಬ್ಬರು ನೇತ್ರದಾನಕ್ಕೆ ನೋಂದಾಯಿಸಿಕೊಂಡು ಇತರರಿಗೆ ಮಾದರಿಯಾಗಬೇಕು. ಅಂಧರಿಗೆ ಕಣ್ಣಿನ ತೊಂದರೆಗಳನ್ನು ಆದಷ್ಟೂ ಬೇಗ ಗುರುತಿಸಿ ಸಲಹೆ, ಚಿಕಿತ್ಸೆಗಳನ್ನು ನೀಡುವ ಅಗತ್ಯವಿದೆ ಎಂದರು.
ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿ ಡಾ. ಚಂದ್ರಶೇಖರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನೇತ್ರದಾನ ಮಾಡುವವರ ಸಂಖ್ಯೆ ಕಡಿಮೆಯಾಗಿ ಬೇಡಿಕೆ ಹೆಚ್ಚಾಗಿದೆ. ನೇತ್ರಗಳನ್ನು ಮಣ್ಣುಪಾಲು ಮಾಡಲುವ ಬದಲು ಅಂಧರ ಬಾಳಿಗೆ ಬೆಳಕಾಗಬೇಕು. ಕಣ್ಣುಗಳನ್ನು ದಾನ ಮಾಡಿ ಜೀವನವನ್ನು ಸಾರ್ಥಕ್ಯಪಡಿಸಿಕೊಳ್ಳೋಣ. ಎಲ್ಲರೂ ನೇತ್ರದಾನಕ್ಕೆ ಪ್ರತಿಜ್ಞೆ ಮಾಡೋಣ ಎಂದು ಹೇಳಿದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಮಹೇಶ್, ಸಿಮ್ಸ್ ಕಾಲೇಜಿನ ಪ್ರಾಂಶುಪಾಲ ಡಾ.ಅಜಯ್, ಸ್ಥಾನಿಕ ವೈದ್ಯಾಧಿಕಾರಿ ಡಾ.ಮಹೇಶ್, ಕಣ್ಣಿನ ವಿಭಾಗದ ಮುಖ್ಯಸ್ಥ ಡಾ.ಮಹೇಶ್ವರ್, ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊರೆಸ್ವಾಮಿ ನಾಯಕ್ ಹಾಜರಿದ್ದರು.