

ವಿಜಯವಾಣಿ ಸುದ್ದಿಜಾಲ ಧಾರವಾಡ
ಅಂಧಕಾರದಿಂದ ಬಳಲುತ್ತಿರುವವರು ಅಂಧರಾಗಿಯೇ ಉಳಿಯಬಾರದು. ಎಲ್ಲರೂ ಸೇರಿ ನೇತ್ರದಾನದ ಅವಶ್ಯಕತೆ ಈಡೇರಿಸಬೇಕಿದೆ ಎಂದು ಎಂ. ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ನಿರ್ದೇಶಕ ಡಾ. ಆರ್. ಕೃಷ್ಣಪ್ರಸಾದ ಹೇಳಿದರು.
38ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ನಿಮಿತ್ತ ನಗರದ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ವತಿಯಿಂದ ಜೋಶಿ ಆಸ್ಪತ್ರೆಯಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಸುಮಾರು 30 ಲಕ್ಷ ಕಾರ್ನಿಯಾ ಅಂಧರಿದ್ದಾರೆ. ಇಡೀ ಜಗತ್ತಿನ ಅಂಧರ ಪೈಕಿ ಶೇ. 40ರಷ್ಟು ಜನ ನಮ್ಮ ದೇಶದಲ್ಲೇ ಇದ್ದಾರೆ. ಕಾರ್ನಿಯಾವನ್ನು ಇನ್ನೊಂದು ಕಾರ್ನಿಯಾ ಬದಲಾವಣೆಯಿಂದ ಮಾತ್ರ ದೃಷ್ಟಿ ನೀಡಬಹುದು. ಇದು ಕೇವಲ ಮರಣಾನಂತರ ಮಾಡುವ ನೇತ್ರದಾನದಿಂದ ಸಾಧ್ಯ. ಪ್ರತಿ ವರ್ಷ ಸಾಯುವ ವ್ಯಕ್ತಿಗಳಿಂದ ನೇತ್ರದಾನ ಆಗುತ್ತಿರುವುದು ತೀರ ಕಡಿಮೆ. ನೇತ್ರದಾನ ಕಡಿಮೆ ಆಗಲು ಮಾಹಿತಿ ಕೊರತೆ, ಮೂಢ ನಂಬಿಕೆ ಮತ್ತು ಸಾಕಷ್ಟು ತಪ್ಪು ಕಲ್ಪನೆಗಳೂ ಕಾರಣ. 10-15 ನಿಮಿಷದಲ್ಲಿ ಯಾವುದೇ ಮುಖಚರ್ಯ ಕೆಡದಂತೆ ನೇತ್ರದಾನ ಮಾಡಬಹುದು. ಈ ನೇತ್ರದಾನಕ್ಕೆ ಎಲ್ಲರ ಅಗತ್ಯ ಮುಖ್ಯ ಎಂದರು.
ಐಎಂಎ ಅಧ್ಯಕ್ಷ ಡಾ. ಗಿರೀಶ ನಾಡಿಗೇರ ಮಾತನಾಡಿ, ಪ್ರತಿ ಆಸ್ಪತ್ರೆಯಲ್ಲೂ ನೇತ್ರದಾನ, ಅಂಗದಾನ ಮಾಹಿತಿ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ಐಎಂಎ ಧಾರವಾಡದಿಂದ ಪ್ರತಿ ಆಸ್ಪತ್ರೆಯಲ್ಲಿ ನೇತ್ರದಾನ ಬಗ್ಗೆ ಮಾಹಿತಿ ನೀಡುತ್ತೇವೆ. ಇದೇ ರೀತಿ ಎಲ್ಲ ಸಂಘ-ಸಂಸ್ಥೆಗಳು ನೇತ್ರದಾನದ ಜಾಗೃತಿ ಮಾಡಬೇಕು ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ ಮಾತನಾಡಿ, ನೇತ್ರದಾನ ಮಹಾದಾನ. ಎಲ್ಲರೂ ಜವಾಬ್ದಾರಿಯಾಗಿ ತಗೆದುಕೊಂಡು ಹೆಚ್ಚು ನೇತ್ರದಾನಗಳಾಗುವಂತೆ ಮಾಡಬೇಕಿದೆ. ಇದು ನಮ್ಮೆಲ್ಲರ ಕುಟುಂಬದ ಸಂಪ್ರದಾಯವಾಗಲಿ ದೇಶವನ್ನು ಅಂಧ ಮುಕ್ತ ದೇಶವನ್ನಾಗಿ ಮಾಡಲು ಎಲ್ಲರೂ ಕೈ ಜೋಡಿಸಿ ಎಂದರು.
ಡಾ. ರಶ್ಮಿ ಕುದರಿ ನೇತ್ರದಾನ ಕುರಿತು ತಿಳಿಸಿದರು. ಸಂಸ್ಥೆ ನಿರ್ದೇಶಕ ಡಾ. ಕೆ.ವಿ. ಸತ್ಯಮೂರ್ತಿ, ವಿವಿಧ ಕಾಲೇಜಿನ ಮುಖ್ಯಸ್ಥರು, ನೇತ್ರದಾನಿಗಳು, ಇತರರು ಇದ್ದರು. ಕಾರ್ಯಕ್ರಮದಲ್ಲಿ ಚಿಕೇನಕೊಪ್ಪ ಅಂಧರ ಆಶ್ರಮದ ವಿದ್ಯಾರ್ಥಿಗಳು ಸಂಗೀತ ಕಾರ್ಯಕ್ರಮ ನೀಡಿದರು.
ಡಾ. ಸಂಜೀವ ಕುಲಕರ್ಣಿ ಸ್ವಾಗತಿಸಿದರು. ಡಾ. ಕಾತ್ಯಾಯಿನಿ ಎಸ್.ವಿ. ನಿರೂಪಿಸಿದರು. ಡಾ. ರೂಪ ಹಿರೇಮಠ ವಂದಿಸಿದರು.