ನೇತ್ರ ತಪಾಸಣೆ ಶಿಬಿರದ ಪ್ರಯೋಜನ ಪಡೆಯಿರಿ

oplus_1024
oplus_1024
Published on

ಚಿತ್ರದುರ್ಗ: ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಿರುವ ನೇತ್ರ ತಪಾಸಣೆ ಉಚಿತ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ. ಗಿರೀಶ್ ಹಿರಿಯ ನಾಗರಿಕರಿಗೆ ಮನವಿ ಮಾಡಿದರು.

ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಆರೋಗ್ಯ ಇಲಾಖೆಗಳ ಸಹಯೋಗದಲ್ಲಿ ನಗರದ ಬಾಲ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ನೇತ್ರ ತಪಾಸಣೆ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿದರು.

ವಯಸ್ಸಿನ ಕಾರಣಕ್ಕೆ ಕಣ್ಣು, ಕಿವಿ, ಹಲ್ಲುಗಳ ಸಮಸ್ಯೆಗಳು ಎದುರಾಗುವುದು ಸಹಜ.ಆದ್ದರಿಂದ ತಪಾಸಣೆಗೆ ಒಳಗಾಗಬೇಕು. ಕಣ್ಣಿನ ತಪಾಸಣೆ, ಕಣ್ಣಿನ ಪೊರೆ ಚಿಕಿತ್ಸೆ, ಕನ್ನಡಕಗಳ ವಿತರಣೆ ಆರೋಗ್ಯ ಇಲಾಖೆಯಿಂದ ನಿರಂತರವಾಗಿ ನಡೆಯುತ್ತಿರುತ್ತದೆ ಎಂದರು.

ಅಂಗವಿಕಲರ ಜಿಲ್ಲಾ ಕಲ್ಯಾಣಾಧಿಕಾರಿ ಜೆ.ವೈಶಾಲಿ ಮಾತನಾಡಿ, ಹಿರಿಯ ನಾಗರಿಕರಿಗೆ ಪ್ರತಿ ತಾಲೂಕಿನಲ್ಲೂ 2 ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು. ಮೊದಲ ಹಂತದ ತಪಾಸಣೆ ಶಿಬಿರಗಳು ಎಲ್ಲ ತಾಲೂಕುಗಳಲ್ಲಿಯೂ ಯಶಸ್ವಿಯಾಗಿವೆ. 2ನೇ ಹಂತದ ಶಿಬಿರ ಫೆ. 24ರಿಂದ ಪ್ರಾರಂಭವಾಗಿದೆ ಎಂದು ತಿಳಿಸಿದರು.

ಜಿಲ್ಲಾಸ್ಪತ್ರೆ ನೇತ್ರ ತಜ್ಞ ಡಾ. ಪ್ರದೀಪ್‌ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರೂಪಣಾಧಿಕಾರಿ ವಿಜಯ್‌ಕುಮಾರ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ್,ನೇತ್ರ ಸಹಾಯಕ ಅಧಿಕಾರಿಗಳಾದ ರಾಮು ಬರ್ಕತಲಿ, ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಿವಾಸ್, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ನೇತ್ರಾ, ಸಹಾಯಕ ಅಧಿಕಾರಿ ಮೈತ್ರಾ ರಾಘವೇಂದ್ರ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಮೈಲಾರಪ್ಪ ಮತ್ತಿತರರು ಇದ್ದರು.

ಕೋಟ್

ಮೊದಲ ಹಂತದ ತಪಾಸಣೆ ಶಿಬಿರಗಳಲ್ಲಿ 38 ಹಿರಿಯ ನಾಗರಿಕರಿಗೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಕಣ್ಣಿನ ಪೊರೆ ರೋಗವಲ್ಲ ವಯೋಸ ಹಜ ಪ್ರಕ್ರಿಯೆ. ಶಸ್ತ್ರ ಚಿಕಿತ್ಸೆ ಮೂಲಕ ಪೊರೆ ತೆಗೆದರೆ ಕಣ್ಣು ಚೆನ್ನಾಗಿ ಕಾಣುತ್ತದೆ. ಇಂಥ ಶಿಬಿರಗಳ ಪ್ರಯೋಜನವನ್ನು ಹಿರಿಯ ನಾಗರಿಕರು ಪಡೆದು ಕೊಳ್ಳಬೇಕು.

ಡಾ. ಪ್ರದೀಪ್‌ಕುಮಾರ್, ನೇತ್ರ ತಜ್ಞ, ಜಿಲ್ಲಾಸ್ಪತ್ರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net