ತುಮಕೂರು: ನಗರದ ಹೌಸಿಂಗ್ ಬೋರ್ಡ್ ನಿವಾಸಿ ನಗ್ಮಾ(30) ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಶುಕ್ರವಾರ ರಾತ್ರಿ ಪತ್ತೆಯಾಗಿದ್ದು, ಸಾವಿಗೆ ಪತಿಯ ಕಿರುಕುಳವೇ ಕಾರಣ ಎಂದು ಆಕೆಯ ಸಂಬಂಧಿಕರು ಠಾಣೆಯಲ್ಲಿ ದೂರು ನೀಡಿದ್ದಾರೆ. 8 ತಿಂಗಳ ಗರ್ಭಿಣಿಯಾಗಿದ್ದ ನಗ್ಮಾ ಸಾವಿಗೆ ಪತಿ ಸೈಯದ್ ಇರ್ಫಾನ್ ಕಾರಣ ಎಂದು ದೂರು ನೀಡಿರುವ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ವರ್ಷವಷ್ಟೇ ವಿವಾಹವಾಗಿದ್ದ ಮೃತ ನಗ್ಮಾ ಹಾಗೂ ಸೈಯದ್ ಇಾರ್ನ್ಗೆ ಇದು ಎರಡನೇ ವಿವಾಹವಾಗಿದ್ದು, ಮದುವೆಗೂ ಮುಂಚೆಯೇ ಮೊದಲ ದಾಂಪತ್ಯದ ಮಕ್ಕಳಿದ್ದರು. ಶುಕ್ರವಾರ ರಾತ್ರಿ ದಂಪತಿ ನಡುವೆ ಜಗಳವಾಗಿದ್ದು, ಮಗನನ್ನು ಆಕೆಯ ತಾಯಿ ಮನೆಗೆ ಬಿಟ್ಟು ಬಂದ ನಗ್ಮಾ ನೇಣಿಗೆ ಶರಣಾಗಿದ್ದಾರೆ. ಮನೆಗೆ ಬಂದಿದ್ದ ಪತಿ ಸೈಯದ್ ಕಿಟಕಿ ಮೂಲಕ ನೇಣಿಗೆ ಶರಣಾಗಿದ್ದನ್ನು ಕಂಡು ಖಚಿತಪಡಿಸಿಕೊಳ್ಳಲು ಯತ್ನಿಸಿದ್ದಾನೆ. ಆಗದಿದ್ದಾಗ ಆಕೆಯ ಮೇಲೆ ಮಣ್ಣು ಎಸೆದಿದ್ದ ಎನ್ನಲಾಗಿದೆ. ಹಾಗಾಗಿ, ಮಣ್ಣು ಬಾಯಿಗೆ ತುರುಕಿ ಕೊಲೆ ಮಾಡಲಾಗಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.