ನೇಕಾರರ ಸಮೀಕ್ಷೆ ಅವಧಿ 1 ತಿಂಗಳು ವಿಸ್ತರಣೆ

h2-KHDC 1
Published on

ಹುಬ್ಬಳ್ಳಿ: ರಾಜ್ಯದಲ್ಲಿರುವ ನೇಕಾರರ ಅಂಕಿ ಸಂಖ್ಯೆ ಕುರಿತು ತಿಳಿದುಕೊಳ್ಳಲು ಎಎಂಎಸ್ ಸಂಸ್ಥೆಯಿಂದ ಸಮೀಕ್ಷೆ ನಡೆಸಲಾಗುತ್ತಿದೆ. ಸಮೀಕ್ಷೆಯ ಅವಧಿಯನ್ನು 1 ತಿಂಗಳು ವಿಸ್ತರಣೆ ಮಾಡಲಾಗುವುದು ಎಂದು ಜವಳಿ, ಕೈಮಗ್ಗ, ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಭಾನುವಾರ ನೇಕಾರ ಮುಖಂಡರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮೀಕ್ಷೆ ಪೂರ್ಣಗೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೇಕಾರ ಸಮ್ಮಾನ ಯೋಜನೆಯಡಿ ಫಲಾನುಭವಿಗಳನ್ನು ಆಯ್ಕೆ ಮಾಡಲಷ್ಟೇ ಸಮೀಕ್ಷೆ ನಡೆಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಸಭೆಯಲ್ಲಿ ನೇಕಾರರು ಅನೇಕ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತಂದಿದ್ದಾರೆ. ಬಜೆಟ್​ನಲ್ಲಿ ನೇಕಾರರ ಅಭಿವೃದ್ಧಿಗೆ 1 ಸಾವಿರ ಕೋಟಿ ರೂ. ಒದಗಿಸಬೇಕೆಂದು ಬೇಡಿಕೆ ಮಂಡಿಸಿದ್ದಾರೆ. ಈ ವಿಷಯವನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗುವುದು. ಹಿಂದೆ ಬಿಜೆಪಿ ಸರ್ಕಾರ ನೇಕಾರರಿಗೆ 5 ಎಚ್​ಪಿ ವರೆಗೆ ಉಚಿತ ವಿದ್ಯುತ್ ಎಂದು ಆದೇಶ ಮಾಡಿತ್ತು. ಆದರೆ, ಕೊಟ್ಟಿರಲಿಲ್ಲ. ಈಗ ನೇಕಾರರು 20 ಎಚ್ ಪಿ ವರೆಗೆ ಉಚಿತ ವಿದ್ಯುತ್​ಗೆ ಬೇಡಿಕೆ ಇಟ್ಟಿದ್ದಾರೆ. ಸರ್ಕಾರದ ಮಟ್ಟದಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ತಿದ್ದುಪಡಿ ಮಾಡಲಾದ ಎಪಿಎಂಸಿ ಕಾಯ್ದೆಯನ್ನು ವಾಪಸ್ ಪಡೆಯಲು ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದ್ದು, ಈ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net